ಸಾರಾಂಶ
ನಮ್ಮ ದೇಶಕ್ಕಾಗಿ ಹೋರಾಡಿದ ವೀರ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಜೆ.ಬಿ. ತಂಬಾಕದ ಹೇಳಿದರು.
ಹಿರೇಕೆರೂರು: ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯಿಂದ ೧೯೪೭ರಲ್ಲಿ ಭಾರತ ದೇಶ ಬಿಡುಗಡೆಯಾಗಿ ವಿಜಯ ದಿನವನ್ನಾಗಿ ನಾವು ಇಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ದೇಶ ಭಕ್ತಿ, ದೇಶ ಪ್ರೇಮ ಭಾರತೀಯರ ಹೃದಯದಲ್ಲಿ ನೆಲೆಸಿ ಇಡೀ ದೇಶಾದ್ಯಂತ ಈ ಧ್ವಜಾರೋಹಣ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರುವುದು ಸಂಭ್ರಮದ ವಿಷಯವಾಗಿದೆ ಎಂದು ಮಾಜಿ ಅಧ್ಯಕ್ಷರಾದ ಜೆ.ಬಿ. ತಂಬಾಕದ ಹೇಳಿದರು. ಪಟ್ಟಣದ ಸಹಕಾರಿ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ೭೮ನೇ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ದೇಶಕ್ಕಾಗಿ ಹೋರಾಡಿದ ವೀರ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ಇಂದು ಹೃದಯ ತುಂಬಿ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಭಾರತೀಯರೆಲ್ಲ ಜಾತಿ, ಭೇದ, ಮತ, ಪ್ರಾಂತ್ಯ ಮರೆತು ಎಲ್ಲರೂ ಒಗ್ಗೂಡಿ ಆಚರಿಸುವ ಏಕೈಕ ಹಬ್ಬ ಸ್ವಾತಂತ್ರ್ಯೋತ್ಸವ. ಇಂದಿನ ಯುವ ಪೀಳಿಗೆ ರಾಷ್ಟ್ರದ ಬಗ್ಗೆ ಅಭಿಮಾನ ಇಟ್ಟುಕೊಂಡು ನಮ್ಮ ದೇಶದ ಮೇಲಿನ ಪ್ರೀತಿಯ ಭಾವನೆಗಳನ್ನು ನಾವೆಲ್ಲ ಒಟ್ಟಾಗಿ ಅಭಿವ್ಯಕ್ತಗೊಳಿಸಬೇಕು ಎಂದು ಕರೆ ನೀಡಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ, ಆಡಳಿತಾಧಿಕಾರಿಗಳಾದ ಎಸ್. ವೀರಭದ್ರಯ್ಯನವರು ವಿದ್ಯಾರ್ಥಿಗಳಿಗೆ ಸ್ವಾತಂತ್ಯ್ರೋತ್ಸವದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ನವೀನ ಯಲಿಗಾರ, ಕವಿತಾ ಅಣಜಿ, ಲಿಂಗರಾಜ ಹಲವಾಲ, ಸೌಮ್ಯ ಆರ್.ಎಸ್., ಮಂಜುಳಾ ಕಣಗೊಟಗಿ, ಎಂ.ವಿ. ಬಾಳಿಕಾಯಿ, ಸುರೇಶ ನಾಯ್ಕ ಬಿ. ಸಮಸ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ದೀಪಾ ನೀರಲಕೇರಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಎಸ್.ಬಿ. ಚನ್ನಗೌಡ್ರ ವಂದಿಸಿದರು.