ಸಾರಾಂಶ
ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ
ಕನ್ನಡಪ್ರಭ ವಾರ್ತೆ ಕುಷ್ಟಗಿಭಾರತದಲ್ಲಿ ಸಾಕಷ್ಟು ಕಾನೂನು ಜಾರಿಯಲ್ಲಿದ್ದು, ಕೇವಲ ನ್ಯಾಯಾಲಯ ಹಾಗೂ ವಕೀಲರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಕಾನೂನು ಪಾಲಿಸಬೇಕು. ಅದು ನಮ್ಮ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.
ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕರ್ನಾಟಕ ಲೋಕಾಯುಕ್ತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ತಾಪಂ ಸಹಯೋಗದಲ್ಲಿ ನಡೆದ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಪಾತ್ರದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಾನೂನುಗಳ ಬಗ್ಗೆ ಅರಿವಿಲ್ಲದೇ ಸಾಕಷ್ಟು ತಪ್ಪುಗಳಾಗುತ್ತಿದ್ದು, ಕಾನೂನು ಉಲ್ಲಂಘನೆಗೆ ಕಾರಣವಾಗುತ್ತಿದೆ. ಕಾನೂನು ಉಲ್ಲಂಘನೆ ನೋಡಿ ಸಹಿಸುವುದು ಕೂಡ ತಪ್ಪಾಗಲಿದೆ. ತಾಲೂಕು ಮಟ್ಟದಲ್ಲಿ ಕಾನೂನು ಅರಿವು ನೆರವು ಶಿಬಿರ ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಆವಶ್ಯಕ ಕಾನೂನುಗಳ ಬಗ್ಗೆ ಕಾನೂನಿನ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದರು.
ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಅಭಿವೃದ್ಧಿಗೆ ತೊಂದರೆಯಾಗಿದೆ. ಭ್ರಷ್ಟಾಚಾರ ಜಾಸ್ತಿಯಾದರೆ ಬೇರೆ ದೇಶದವರು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುವ ಅಪಾಯವಿದೆ. ನಾವೆಲ್ಲರೂ ಭ್ರಷ್ಟಾಚಾರ ನಿರ್ಮೂಲನೆಗೆ ಬದ್ಧರಾಗಬೇಕಿದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧಿಶ ಬಿ. ಸತೀಶ ಕಾನೂನು ಅರಿವು ನೆರವು ಕಾರ್ಯಕ್ರಮ ಕುರಿತು, ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ, ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ಚಂದ್ರಪ್ಪ ಈಟಿ ಮಾತನಾಡಿದರು.ಈ ಸಂದರ್ಭ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ಸರ್ಕಾರಿ ಸಹಾಯಕ ಅಭಿಯೋಜಕ ರಾಯನಗೌಡ ಎಲ್. ಇಂದಿರಾ ಸುಹಾಸಿನಿ ಇದ್ದರು. ಪ್ರಾಚಾರ್ಯ ಡಾ. ಎಸ್.ಸಿ. ತಿಪ್ಪಾಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಪೊಲೀಸ್ ಅಧಿಕಾರಿ ಸುನೀಲ್ ಮ್ಯಾಗಲಮನಿ, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ಲಿಂಗಸುಗೂರು, ಲೋಕಾಯುಕ್ತ ಪೊಲೀಸ್ ಅಧಿಕಾರಿ ರಾಜೇಶ ಬಟಗುರ್ಕಿ ಇದ್ದರು. ಶ್ರೀ ವಿಜಯ ಚಂದರಶೇಖರ ಕಾಲೇಜ್ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.