ಜೀವಜಲ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆ: ನ್ಯಾ.ಕಮತಗಿ

| Published : Mar 25 2024, 12:52 AM IST

ಜೀವಜಲ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆ: ನ್ಯಾ.ಕಮತಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಜೆಎಂಎಫ್‌ಸಿ ಕೋರ್ಟ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ. ಮಲ್ಲಿಕಾರ್ಜುನ ಕಮತಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಜಗತ್ತಿನಲ್ಲಿರುವ ಹನಿ ನೀರು ಜೀವ ಉಳಿಸಬಲ್ಲದು. ಆದ್ದರಿಂದ ಜೀವಜಲ ಉಳಿಸಿ ಜೀವ ಸಂಕುಲಗಳನ್ನು ರಕ್ಷಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಮತಗಿ ಹೇಳಿದರು.

ನಗರದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಕಾನೂನು ಸೇವೆ ಪ್ರಾಧಿಕಾರ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಜೀವಿಗೂ ನೀರು ಅಗತ್ಯ ಎಂದರು.

ನೈಸರ್ಗಿಕವಾಗಿ ದೊರೆಯುವ ನೀರಿನ ಪ್ರಾಮುಖ್ಯತೆ ಮತ್ತು ಅಗತ್ಯತೆಯನ್ನು ಮಾನವ ಕುಲಕ್ಕೆ ತಿಳಿಸಲು ಪ್ರತಿವರ್ಷ ಮಾ.22ರಂದು ವಿಶ್ವಜಲ ದಿನವನ್ನಾಗಿ ಪ್ರಪಂಚಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಸಮೃದ್ಧಿ ಮತ್ತು ಶಾಂತಿಗಾಗಿ ನೀರು ಎಂಬ ವಿಷಯದ ಮೇಲೆ ಜಲ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪರಿಸರ ನಾಶದಿಂದ ಮಳೆ ಕೊರತೆ ಎದುರಾಗಿ ಕುಡಿವ ನೀರಿನ ತೊಂದರೆ ಉಂಟಾಗಿದೆ. ಬಯಲು ಸೀಮೆಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ನೀರು ವ್ಯರ್ಥ ಮಾಡದೆ ಉಳಿಕೆ ಮಾಡಬೇಕಿದೆ. ನೀರು ಉತ್ಪಾದಿಸಲಾಗದ ವಸ್ತು. ಆದ್ದರಿಂದ ಜೀವ ಜಲವನ್ನು ಬಹಳ ಜಾಗರೂಕತೆಯಿಂದ ಬಳಸಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಗುರುಪಾದಪ್ಪ ಬನ್ನಾಳ ದೇವೇಂದ್ರಪ್ಪ ಬೇವಿನಕಟ್ಟಿ ಉಪನ್ಯಾಸ ನೀಡಿದರು.

ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ, ಹೆಚ್ಚುವರಿ ನ್ಯಾಯಾಧೀಶರಾದ ಬಸವರಾಜ, ಎಪಿಪಿಗಳಾದ ಸುರೇಶ ಪಾಟೀಲ್, ಮರೆಪ್ಪ ಹೊಸಮನಿ, ಮಲ್ಲಿಕಾರ್ಜುನ ಮಂಗ್ಯಾಳ, ಮಂಜುನಾಥ ಹುದ್ದಾರ, ವಿನಾಯಕ, ಹಿರಿಯ ಮತ್ತು ಕಿರಿಯ ವಕೀಲರು ಸೇರಿದಂತೆ ಇತರರಿದ್ದರು.