ಸಾರಾಂಶ
ಸಾಗರ: ಕಲ್ಮನೆ ಸೊಸೈಟಿಯಲ್ಲಿ ಹಣ ಕಳೆದುಕೊಂಡ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹಣ ವಾಪಾಸ್ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕಲ್ಮನೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸೊಸೈಟಿಯಲ್ಲಿ ಕೂಲಿಕಾರ್ಮಿಕರು, ಅಡಕೆ ಸುಲಿಯುವವರು, ಸಣ್ಣ ಅತಿಸಣ್ಣ ಬೆಳೆಗಾರರು ಠೇವಣಿ, ಪಿಗ್ಮಿ ಇನ್ನಿತರೆ ರೂಪದಲ್ಲಿ ಹಣ ತೊಡಗಿಸಿದ್ದರು. ಅದನ್ನು ಸಂಸ್ಥೆಯ ಕಾರ್ಯದರ್ಶಿ ಲಪಟಾಯಿಸಿದ್ದು, ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದೆ ಎಂದರು.ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾದ ತಕ್ಷಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡರ ಜೊತೆ ಚರ್ಚೆ ನಡೆಸಿ ಹಣ ಕಳೆದುಕೊಂಡವರಿಗೆ ಹಣ ವಾಪಾಸ್ ಕೊಡಿಸುವ ಪ್ರಯತ್ನ ನಡೆಸಿದ್ದೇವೆ. ಈಗಾಗಲೆ ಕಲಂ ೬೪ರ ಅಡಿ ತನಿಖೆ ನಡೆಯುತ್ತಿದೆ. ತನಿಖೆ ಅತೀ ಶೀಘ್ರವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಹಕರು ಯಾರನ್ನೋ ನಂಬಿ ಖಾಲಿ ಚೆಕ್‌ಗಳಿಗೆ ಸಹಿ ಹಾಕಿಕೊಡಬಾರದು. ಜನ ಸೇರಿದಾಗ ತಾವು ಹಣ ವಾಪಾಸ್ ಕೊಡಿಸುತ್ತೇವೆ ಎಂದು ಕೆಲವರು ಭಾಷಣ ಬಿಗಿಯುತ್ತಾರೆ. ಆದರೆ ವಾಸ್ತವಾಂಶ ಅರಿಯದೆ ಸುಳ್ಳು ಭರವಸೆಗಳನ್ನು ನಂಬಬೇಡಿ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ನಂ. ೧ ಸಹಕಾರಿ ಸಂಸ್ಥೆಯಾಗಿ, ರಾಜ್ಯದ ಕೆಲವೆ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಕಲ್ಮನೆ ಸೊಸೈಟಿಯಲ್ಲಿ ನಡೆದಿರುವ ದೊಡ್ಡಮಟ್ಟದ ಅವ್ಯವಹಾರ ಬೇಸರ ತರಿಸಿದೆ. ಈಗಾಗಲೆ ಅಕ್ರಮ ಹಣ ಡ್ರಾ ಮಾಡಿಕೊಂಡಿರುವ ಕುರಿತು ತನಿಖೆ ನಡೆಯುತ್ತಿದೆ. ಜನರ ನಂಬಿಕೆ ವಿಶ್ವಾಸದ ಮೇಲೆ ಸಹಕಾರಿ ಸಂಸ್ಥೆಗಳು ನಡೆಯುತ್ತಾ ಇರುತ್ತದೆ. ಆದರೆ ಕೆಲವರು ಮಾಡುವ ಅವ್ಯವಹಾರದಿಂದ ಜನರು ಸಹಕಾರಿ ಸಂಸ್ಥೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಆಗುತ್ತದೆ ಎಂದರು.ಸದಸ್ಯರು ತಾವು ಸಾಲ ಪಡೆದುಕೊಂಡಿರುವುದರಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ತಕ್ಷಣ ಮರುಪಾವತಿ ಮಾಡಿ. ಹೊಸ ಸಾಲವನ್ನು ಮುಂದಿನ ಹದಿನೈದು ದಿನಗಳಲ್ಲಿ ಕೊಡುತ್ತೇವೆ. ಹಿಂದಿನ ಕಾರ್ಯದರ್ಶಿ ಚಾಣಾಕ್ಷತನದಿಂದ ಹಣವನ್ನು ವಂಚಿಸಿದ್ದಾನೆ. ಅನೇಕ ಬಾರಿ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಅವರಿಗೆ ಹಣ ಮರುಪಾವತಿ ಮಾಡುವಂತೆ ಸೂಚಿಸಿದ್ದೇನೆ. ಅದರೆ ಅವರು ಸ್ಪಂದಿಸಿಲ್ಲ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಅನ್ನಪೂರ್ಣ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ಸಹಕಾರ ಇಲಾಖೆಯ ಸತೀಶ್, ಪ್ರಮುಖರಾದ ಕೆ.ಸಿ.ದೇವಪ್ಪ, ಇಂದೂಧರ ಬೇಸೂರು, ಎಂ.ಜಿ.ಕೃಷ್ಣಮೂರ್ತಿ, ಆರ್.ಎಸ್.ಗಿರಿ, ಸುಬ್ರಾವ್, ಮಹಾಬಲೇಶ್ವರ ನಾಯ್ಕ್, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.