ಸಾರಾಂಶ
- ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಶೃಂಗೇರಿ ಕ್ಷೇತ್ರಮಟ್ಟದ ಅಮ್ಮ ಫೌಂಡೇಶನ್ ಬೃಹತ್ ಉದ್ಯೋಗ ಮೇಳ
ಕನ್ನಡಪ್ರಭ ವಾರ್ತೆ, ಶೃಂಗೇರಿಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಹಾಗೂ ಮಕ್ಕಳ ಕೌಶಲಾಭಿವೃದ್ಧಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಆಧರಿಸಿ ಜಾರಿಗೆ ತಂದಿದ್ದ ಹೊಸಶಿಕ್ಷಣ ನೀತಿ ಎನ್ಇಪಿ ರಾಜ್ಯ ಸರ್ಕಾರ ಕೈಬಿಟ್ಟಿರುವುದು ಅತ್ಯಂತ ದುರದೃಷ್ಟಕರ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಅಮ್ಮ ಪೌಂಡೇಶನ್ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಬಿನ್ನಾಭಿಪ್ರಾಯ ಇದ್ದರೂ ಶೈಕ್ಷಣಿಕ ವಿಚಾರದಲ್ಲಿ ಅದು ಸರಿಯಲ್ಲ. ಶಿಕ್ಷಣದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮಕ್ಕಳ ಕಲಿಕೆ ಉತ್ತಮಪಡಿಸುವ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಒಂದು ಒಳ್ಳೆಯ ಯೋಜನೆ. ಅಲ್ಲದೇ ಇದೊಂದು ಅಪೂರ್ವ ಶಿಕ್ಷಣ ನೀತಿ.ಆದರೂ ಕೂಡ ಈ ವಿಚಾರ ಚರ್ಚೆಯಲ್ಲಿದೆ.ಉದ್ಯೋಗ ಕಟ್ಟಿಕೊಡುವ ಕೆಲಸ ಸುಲಭದ ಕೆಲಸವಲ್ಲ. ರಾಜಕಾರಣಿಗಳು ಉದ್ಯೊಗ ಕೊಡಿಸಲು ಸಾಧ್ಯವಿಲ್ಲ. ಉದ್ಯೋಗ ಕೊಡಿಸಿ ಎಂದು ಜನರು ಬರುತ್ತಾರೆ. ಆದರೆ ಪ್ರಭಾವ ಬಳಸಿ ಕೆಲಸ ಕೊಡಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 6.5ಕೋಟಿ ಜನರಿದ್ದಾರೆ. ವರ್ಷಕ್ಕೆ 4.5 ಲಕ್ಷ ಕೋಟಿ ಸರ್ಕಾರದ ಆದಾಯವಿದೆ. ಸರ್ಕಾರ ಶೇ .1 ರಷ್ಟು ಉದ್ಯೋಗ ಕೊಡಬಹುದು. ಶೇ 99 ರಷ್ಟು ಜನ ಸ್ವಂತ ಉದ್ಯೋಗ, ಕಂಪೆನಿ ಇತ್ಯಾದಿ ಅವಲಂಭಿಸಬೇಕಾಗುತ್ತದೆ ಎಂದರು.
ರಾಜಕಾರಣಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜೈಲಿನಲ್ಲಿ ಕುಳಿತು ಆಡಳಿತ, ರಾಜಕಾರಣ ಮಾಡುವಂತಾಗ ಬಾರದು. ಆರೋಪ ಬಂದಾಗ ಒಪ್ಪಿಕೊಳ್ಳಬೇಕು. ಅಧಿಕಾರ ಬಿಟ್ಟುಕೊಡಬೇಕು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಮಂತ್ರಿ ಯಾರಾದರೂ ತಮ್ಮ ಮೇಲೆ ಆರೋಪ ಬಂದಾಗ ಅಧಿಕಾರ ಬಿಟ್ಟು ತಪ್ಪನ್ನು ಒಪ್ಪಿಕೊಳ್ಳುವಂತಿರಬೇಕು. ನಮ್ಮ ಕಾನೂನು, ಶೈಕ್ಷಣಿಕ ವ್ವವಸ್ಥೆ ಗಳು ಆಗಾಗ ಬದಲಾವಣೆ ಯಾಗುತ್ತಿರಬೇಕು. ಸರ್ಕಾರಗಳು ಶಿಕ್ಷಣ ನೀತಿ, ಆರೋಗ್ಯ ನೀತಿಗಳನ್ನು ಆಗಾಗ ಬದಾಲಾಯಿಸುತ್ತಿರಬೇಕು ಎಂದು ಹೇಳಿದರು.ಇಂದು ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಸಂಸ್ಕಾರವಂತರಾಗುತ್ತಿಲ್ಲ.ಅಪರಾಧ ಪ್ರಕರಣಗಳು ಜಾಸ್ತಿ ಯಾಗುತ್ತಿದೆ. ಯುವಜನರನ್ನು ಒಳ್ಳೆಮಾರ್ಗದರ್ಶನ ನೀಡಿ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಉದ್ಯೋಗ ಮೇಳಗಳು ಉದ್ಯೋಗ ನೀಡುವ ಜೊತೆಗೆ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.
ಅಮ್ಮ ಪೌಂಡೇಷನ್ ಮುಖ್ಯಸ್ಥ ಸುಧಾಕರ ಶೆಟ್ಟಿ ಮಾತನಾಡಿ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ಅನಿವಾರ್ಯ, ಶಿಕ್ಷಣದ ಜೊತೆ ಉದ್ಯೋಗ ಮುಖ್ಯ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ನಮಗೆ ಸಿಕ್ಕಿದ ಅವಕಾಶ ಬಳಸಿಕೊಳ್ಳಬೇಕು. ಸಿಕ್ಕಿದ ಯಾವುದೇ ಉದ್ಯೋಗ ಸ್ವೀಕರಿಸಬೇಕು. ಜೀವನದಲ್ಲಿ ಒಮ್ಮೆ ಎಡವಿದರೆ ಮತ್ತೆ ಸರಿಪಡಿ ಸಿಕೊಳ್ಳುವುದು ಕಷ್ಟ. ಯುವಜನತೆ ಕಲ್ಪನಾ ಲೋಕದಿಂದ, ಭ್ರಮಲೋಕದಿಂದ ಹೊರಬರಬೇಕು. ನಿರಂತರ ಪರಿಶ್ರಮ, ಪ್ರಯತ್ನ ಮುಖ್ಯ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಸಮಾಜ ಸೇವೆಗೆ ಪಕ್ಷಾತೀತ ಮನೋಭಾವ ಮುಖ್ಯ. ವಿದ್ಯಾವಂತರು ಸಮಾಜದ ಆಸ್ತಿ ಎಂದರು.ಉದ್ಯಮಿ ಕೆ.ಎನ್.ನರಸಿಂಹಮೂರ್ತಿ ಮಾತನಾಡಿ ಉದ್ಯೋಗ ಜೀವನೋಪಾಯಕ್ಕಾಗಿ ಅಲ್ಲ. ಪ್ರತಿಯೊಬ್ಬರಿಗೂ ಉದ್ಯೋಗದ ಹಸಿವು ಇರಬೇಕು. ಜೊತೆಗೆ ಶ್ರಮ, ಪ್ರಯತ್ನವೂ ಮುಖ್ಯ. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುವುದಿಲ್ಲ. ಛಲ, ಗುರಿಯಿರಬೇಕು ಎಂದರು.
ಜೆಡಿಎಸ್ ಮುಖಂಡ ಭರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಲವಾನೆ ಪ್ರಕಾಶ್, ಜಿ.ಜಿ,ಮಂಜುನಾಥ್, ಡಿ.ಸಿ.ಶಂಕರಪ್ಪ, ದಿವಾಕರ ಭಟ್,ದಿನೇಶ್ ಹೆಗ್ಡೆ,ದೇವೇಂದ್ರ ಹೆಗ್ಡೆ, ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಎಂ.ಸ್ವಾಮಿ ಮತ್ತಿತರರು ಇದ್ದರು.23 ಶ್ರೀ ಚಿತ್ರ 1-
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಅಮ್ಮ ಬೃಹತ್ ಉದ್ಯೋಗ ಮೇಳವನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಸುದಾಕರ ಶೆಟ್ಟಿ, ಡಿ.ಸಿ.ಶಂಕರಪ್ಪ ಮತ್ತಿತರರು ಇದ್ದರು.