ಸಾರಾಂಶ
ಬೀದರ್: ನಾವೆಲ್ಲರೂ ನಮ್ಮ ನಮ್ಮ ಮನೆಯಿಂದಲೇ ಸ್ವಚ್ಛತೆಯ ಕಾರ್ಯ ಆರಂಭಿಸೋಣ ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಚೆನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನ.19ರಿಂದ ಡಿ.10ರ ವರೆಗೆ ನಡೆಯುವ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ ಎಂದರು.ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಕೂಡ ಶೌಚಾಲಯ ಇರುವುದು ಅತೀ ಮುಖ್ಯವಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯ ಅಥವಾ ಸ್ವಂತ ಹಣದಿಂದಾಗಲಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಹೇಳಿದರು.ಡಿ.10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮ ಅತೀ ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಿರುತ್ತದೆಯೊ ಅಂತಹ ಗ್ರಾಮ ಪಂಚಾಯತಿಯ 3 ಗ್ರಾಮಗಳಿಗೆ ವೈಯಕ್ತಿಕ ಬಹುಮಾನ ನೀಡುತ್ತೇನೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಯಲು ಮಲ ವಿಸರ್ಜನೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಬಯಲು ಸ್ವಚ್ಛ ಮುಕ್ತ ಮಾಡಲು ನಾವೆಲ್ಲರೂ ಪಣ ತೊಡೋಣ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಮಾತನಾಡಿ, ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರಗತಿ ಸಾಧಿಸಲಾಗಿದ್ದು, 2,25,826 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯ ಕಟ್ಟುವುದರ ಜೊತೆಗೆ ಬಳಕೆ ಮಾಡುವ ಕುರಿತು ಗ್ರಾಮ ಪಂಚಾಯತ್‌ಗಳಿಂದ ಅರಿವು ನೀಡಲಾಗಿದೆ ಎಂದು ತಿಳಿಸಿದರು.ನ.19 ರಿಂದ ಡಿ.10 ರ ವರೆಗೆ ನಡೆಯುವ ಈ ವಿಶೇಷ ಆಂದೋಲನಕ್ಕೆ ಎಲ್ಲರೂ ಸಹಕರಿಸಬೇಕು. ಡಿ.10 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮವಾಗಿ ಸ್ವಚ್ಚತೆ ನಿರ್ವಹಿಸಿದ ಗ್ರಾಮ ಪಂಚಾಯತಿಗಳಿಗೆ ಸ್ವಚ್ಛತಾ ಸಿಬ್ಬಂದಿ, ಪಿಡಿಒಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನಿಸಲಾಗುವುದು ಎಂದರು.ಇದೇ ವೇಳೆ ಸೆ.14 ರಿಂದ ಅ.2 ರವರೆಗೆ ನಡೆದ ಸ್ವಚ್ಛತಾ ಸೇವಾ ಆಂದೋಲನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹುಮನಾಬಾದ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ.ಬಿ ನಾಯ್ಕರ್ ಹಾಗೂ ಸ್ವಚ್ಛತಾ ಸಿಪಾಯಿಗಳಿಗೆ ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಗ್ರಾಮೀಣ ಕುಡಿಯುವ ನೀರು ಘಟಕದ ಕಾರ್ಯಪಾಲಕ ಅಭಿಯಂತರ ರಾಮಲಿಂಗಪ್ಪ ಬಿರಾದಾರ, ಜಿಲ್ಲಾ ಪಂಚಾಯತ್ ಪಿಡಿ ಜಗನ್ನಾಥ ಮೂರ್ತಿ, ಸ್ವಚ್ಛ ಭಾರತ ಮಿಷನ್ ವಿಶೇಷ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ, ಐಇಸಿ ಸಮಾಲೋಚಕರಾದ ಪಂಡಿತ್ ವಾಡೇಕರ, ಜಿಲ್ಲೆಯ ತಾ.ಪಂ ಅಧಿಕಾರಿಗಳು, ಗ್ರಾಮ ಪಂಚಾಯತ ಪಿಡಿಒಗಳು ಅನೇಕರು ಉಪಸ್ಥಿತರಿದ್ದರು.