ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಹೊರಗಿನ ಬೆಳಕು ಎಲ್ಲರ ಮನದೊಳಗಿನ ಬೆಳಕಾಗಲಿ ಎಂಬುದು ಈ ದೀಪೋತ್ಸವ ಆಚರಣೆಯ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಸೋಮವಾರ ಸಂಜೆ ಪಟ್ಟಣದ ಐತಿಹಾಸಿಕ ಶ್ರೀಪ್ರಸನ್ನ ಪಾರ್ವತಿ ಸಮೇತ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲದ ಮುಂಭಾಗದಲ್ಲಿ ಕಾರ್ತಿಕ ಮಾಸದ ಮೂರನೇ ಸೋಮವಾರ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ತಿಕ ಮಾಸ ದೇಶದಾದ್ಯಂತ ಬೆಳಕು ಮೂಡಿಸಿ ಮನುಷ್ಯನ ಬದುಕಿಗೆ ಹೊಸ ಬೆಳಕಾಗಿ ನಮ್ಮನ್ನು ಕೈ ಹಿಡಿದು ನಡೆಸುತ್ತಿದೆ. ಮನೆಯ ಅಂಗಳದಲ್ಲಿ ಬೆಳಗುವ ದೀಪಕ್ಕಿಂತ ಕಾರ್ತಿಕ ಮಾಸದಲ್ಲಿ ಎಲ್ಲೆಡೆ ಕಂಡು ಬರುವ ಬೆಳಕು ಜೀವನಕ್ಕೆ ಉತ್ಸಾಹ, ಚೈತನ್ಯ ತಂದು ಕೊಡುತ್ತದೆ. ಸದ್ಭಕ್ತರು ಎಲ್ಲೆಡೆ ಬೆಳಕು ಕಂಡು ಹರ್ಷಚಿತ್ತರಾಗಿ ಎಲ್ಲರೊಡನೆ ಬೆರೆತು ದೀಪೋತ್ಸವದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು. ಕರುಣಾಳು ಬಾ ಬೆಳಕೆ ಮುಸುಕಿದ ಈ ಮಬ್ಬಿನಲಿ ಕೈ ಹಿಡಿದು ನಡೆಸು ಎಲ್ಲರನು ಎಂಬ ಕವಿ ವಾಣಿಯಂತೆ ಈ ಕಾರ್ತಿಕ ಮಾಸದ ಮಹತ್ವವನ್ನು ಅರಿತು ದೇವರಲ್ಲಿ ಪ್ರಾರ್ಥಿಸಿದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಮಧುಗಿರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇಗುಲದ ಮುಂಭಾಗ ಕಾರ್ತಿಕ ಮಾಸದ ದೀಪೋತ್ಸವ ಆಯೋಜಿಸಿ ಭಕ್ತಾದಿಗಳಲ್ಲಿ ಉತ್ಸಾಹ ತುಂಬಿರುವುದು ಸಂತಸ ತಂದಿದೆ ಎಂದರು.
ತಹಸೀಲ್ದಾರ್ ಶಿರಿನ್‌ತಾಜ್ , ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿದರು. ದೀಪೋತ್ಸವಕ್ಕೂ ಮುನ್ನ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಬಂಧುಗಳಿಂದ ಅಗ್ನಿಹೋತ್ರ ಹೋಮ, ಲಲಿತ ಸಹಸ್ರನಾಮ ಪಾರಾಯಣ ಹಾಗೂ ಸಂಕಲ್ಪ ಮಾಡಲಾಯಿತು.ಪುರಸಭೆ ಉಪಾಧ್ಯಕ್ಷೆ ಸುಜಾತ ಶಂಕರ ನಾರಾಯಣ್, ಅಡಿಟರ್ ಲಕ್ಷ್ಮೀ ಪ್ರಸಾದ್, ಸಿಪಿಐ ಹನುಮಂತರಾಯಪ್ಪ, ಪುರಸಭೆ ಸದಸ್ಯರಾದ ಎಂ.ಕೆ.ನಂಜುಂಡರಾಜು, ಎಂ.ಶ್ರೀಧರ, ಎಂ.ವಿ.ಗೋವಿಂದರಾಜು, ಎನ್.ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಭಕ್ತ ಮಂಡಳಿಯ ಜಿ.ನಾರಾಯಣರಾಜು, ದೋಲಿಬಾಬು, ಜಿ.ಆರ್.ಧನ್‌ಪಾಲ್, ಕೆ.ಎಸ್.ಪಿ.ರೆಡ್ಡಿ, ಮೂಡ್ಲಗಿರೀಶ್, ಪ್ರಧಾನ ಅರ್ಚಕರಾದ ನಟರಾಜ್ ದೀಕ್ಷಿತ್, ಅನಂತ ಪದ್ಮನಾಭ ಭಟ್ ಹಾಗೂ ಅಪಾರ ಭಕ್ತಾದಿಗಳು ಇದ್ದರು.