ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ದಾನ, ಧರ್ಮ, ಪರೋಪಕಾರ ಗುಣವುಳ್ಳ ವ್ಯಕ್ತಿಗೆ ಎಂದಿಗೂ ಸಾವಿಲ್ಲ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಆತನ ಒಳ್ಳೆಯ ಗುಣಗಳಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಶಿವಾನಂದ ಮ್ಯಾಗೇರಿ ಹೇಳಿದರು.ತಾಲೂಕಿನ ಹೊಸೂರ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವ, ಧ್ವನಿ ಸುರುಳಿ ಬಿಡುಗಡೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ಧನ ಸಹಾಯ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ ಸಾಯಬಹುದು ಆದರೆ ಆ ಒಳ್ಳೆಯ ವ್ಯಕ್ತಿತ್ವದ ಗುಣಗಳು ಎಂದಿಗೂ ಸಾಯುವುದಿಲ್ಲ, ಆ ಗುಣಗಳೇ ಅವನನ್ನು ಎತ್ತರದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ ಎನ್ನುವುದಕ್ಕೆ ಛಬ್ಬಿ ಕುಟುಂಬದವರು ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿರುವುದೇ ಸಾಕ್ಷಿ ಎಂದರು.
ಭರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಮನುಷ್ಯನ ಮನಸ್ಸು ದಾನ ಧರ್ಮದ ಕಡೆಗೆ ವಾಲಬೇಕು, ಅಂದಾಗ ಮನಃಶಾಂತಿ ಅರಸಿ ಬರುತ್ತದೆ, ದಾನ ಮಾಡುವವನ ಹಿಂದೆಯೇ ಆತನ ವ್ಯಕ್ತಿತ್ವ ರೂಪಗೊಂಡಿರುತ್ತದೆ. ಅದುವೆ ಆತನ ಮೌಲ್ಯದ ಕನ್ನಡಿಯಾಗಿದೆ ಎಂದರು.ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ, ಸಂಸ್ಥೆಯ ಅಧ್ಯಕ್ಷೆ ಭಾರತಿ ವರ್ಧಮನ್ ಛಬ್ಬಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಧ್ವನಿ ಸುರಳಿ ಬಿಡುಗಡೆ ಮಾಡಿದರು. ಡಾ. ಲತಾ ನಿಡಗುಂದಿ ಪ್ರಸ್ತುತಪಡಿಸಿದ ಮೂಕಾಭಿನಯ ಹಾಗೂ ಕುನ್ನೂರ ಭಜನಾ ಕಲಾವಿದರ ಭಜನಾ ಕಾರ್ಯಕ್ರಮ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ಪ್ರಮುಖರಾದ ಸುಪ್ರಿತಾ ಛಬ್ಬಿ, ನಾಗಪ್ಪ ಜಗಣ್ಣವರ, ಡಾ. ಈರಮ್ಮ ಹಿರೇಮಠ ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಕಾಲೇಜಿನ ಐದು ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು.
ಶಿಕ್ಷಕ ವರ್ಧಮಾನ್ ಛಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಛಬ್ಬಿ, ನಾಗರಾಜ್ ಛಬ್ಬಿ, ಅಜಿತ ಹಾವೇರಿ, ಜ್ಯೋತಿ ಮಂಟಗಣಿ, ಸುಮಾ ಹಾವೇರಿ, ಅವಿನಾಶ ಮಂಟಗಣಿ, ಹರೀಶ್ ಛಬ್ಬಿ, ಸುನೀತಾ ಛಬ್ಬಿ, ಆರತಿ ಛಬ್ಬಿ, ನಾಗರಾಜ್ ಛಬ್ಬಿ ಸೇರಿದಂತೆ ಇತರರಿದ್ದರು. ಶಿಕ್ಷಕ ನಾಗಪ್ಪ ಬೆಂತೂರ ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))