ನಿಸ್ವಾರ್ಥ ಸೇವಾ ಮನೋಭಾವದಿಂದ ಶ್ರಮಿಸಿದಾಗ ಆರ್ಥಿಕವಾಗಿ ಪ್ರಬಲಗೊಳ್ಳಲು ಸಾಧ್ಯ: ದಾನಿ

| Published : Sep 24 2024, 01:49 AM IST

ನಿಸ್ವಾರ್ಥ ಸೇವಾ ಮನೋಭಾವದಿಂದ ಶ್ರಮಿಸಿದಾಗ ಆರ್ಥಿಕವಾಗಿ ಪ್ರಬಲಗೊಳ್ಳಲು ಸಾಧ್ಯ: ದಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತಗೊಳ್ಳದೆ ಎಲ್ಲ ರಂಗದಲ್ಲಿ ಸಾಧನೆ ಮಾಡುವ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ.

ತಾಲೂಕಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ೩೧ನೇ ವಾರ್ಷಿಕ ಮಹಾಸಭೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತಗೊಳ್ಳದೆ ಎಲ್ಲ ರಂಗದಲ್ಲಿ ಸಾಧನೆ ಮಾಡುವ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜಿ.ದಾನಿ ಹೇಳಿದರು.

ಪಟ್ಟಣದ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಭಾನುವಾರ ತಾಲೂಕಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ೩೧ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಹಕಾರಿ ಸಂಘಗಳ ಎಲ್ಲ ಆಡಳಿತ ವರ್ಗದ ಮಂಡಳಿಯವರು ನಿಸ್ವಾರ್ಥ ಸೇವಾ ಮನೋಭಾವದಿಂದ ಶ್ರಮಿಸಿದಾಗ ಆರ್ಥಿಕವಾಗಿ ಪ್ರಬಲಗೊಳ್ಳಲು ಸಾಧ್ಯ ಎಂದರು.

ಅನೇಕ ಹಿರಿಯ ಶಿಕ್ಷಕರ ಪರಿಶ್ರಮದಿಂದ ಸ್ಥಾಪನೆಗೊಂಡ ಸಂಘ ಸಾಕಷ್ಟು ಲಾಭ ಗಳಿಸುವ ಮೂಲಕ ತಲಾ ಒಬ್ಬ ಶಿಕ್ಷಕರಿಗೆ ₹೫ ಲಕ್ಷ ಸಾಲ ನೀಡುವುದು, ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಹಲವಾರು ಹೊರೆ ನೀಗಿಸುವ ಕಾರ್ಯವೈಖರಿ ನನಗೆ ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೈ.ಜಿ.ಪಾಟೀಲ, ಮಾರುತಿ ತಳವಾರ, ಶರಣಯ್ಯ ಸರಗಣಾಚಾರ ಮಾತನಾಡಿದರು.

ಪ್ರಾಥಮಿಕ ಶಾಲಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ರಾಜೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ನಾಗರಾಜ ಬೇಲೇರಿ ವರದಿ ವಾಚಿಸಿದರು.

ಶಿಕ್ಷಕರಾದ ಮಹೇಶ ಸಬರದ, ಸುರೇಶ ಮಡಿವಾಳರ, ಬಾಲದಂಡಪ್ಪ ತಳವಾರ, ಸಿದ್ಲಿಂಗಪ್ಪ ಶ್ಯಾಗೊಟಿ, ಶ್ರೀಕಾಂತ ಮಾಸಗಟ್ಟಿ, ಶೇಖರಗೌಡ ಪಾಟೀಲ, ಮಹಾಂತೇಶ ಅಂಗಡಿ, ಶಶಿಧರ ಪಾಟೀಲ, ಮೆಹಬೂಬಸಾಬ ಬಾದಶಾಹ, ಮಹಿಳಾ ಸದಸ್ಯೆಯರು ಮತ್ತು ಪತ್ತಿನ ಸಂಘದ ಸರ್ವ ಪದಾಧಿಕಾರಿಗಳು ಇದ್ದರು.