ಸಾರಾಂಶ
ಪರರಲ್ಲಿ ಕಾಳಜಿ ತೋರುವುದರ ಮೂಲಕ ದೇವರ ದಯೆ ಹಾಗೂ ಪ್ರೀತಿಯನ್ನು ಅನುಭವಿಸಲು ಸಾಧ್ಯ ಎಂದು ಧರ್ಮಾಧ್ಯಕ್ಷ ವಂ ಡಾ. ಫ್ರಾನ್ಸಿಸ್ ಸೆರಾವೊ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪರರಲ್ಲಿ ಕಾಳಜಿ ತೋರುವುದರ ಮೂಲಕ ದೇವರ ದಯೆ ಹಾಗೂ ಪ್ರೀತಿಯನ್ನು ಅನುಭವಿಸಲು ಸಾಧ್ಯವಿದೆ ಎಂದು ಶಿವಮೊಗ್ಗ ಕೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಡಾ ಫ್ರಾನ್ಸಿಸ್ ಸೆರಾವೊ ಹೇಳಿದರು.ಅವರು ಬುಧವಾರ ತೊಟ್ಟಂ ಸಂತ ಅನ್ನಮ್ಮ ದೇವಾಲಯ ವಾರ್ಷಿಕ ಜಾತ್ರಾ ಮಹೋತ್ಸವದ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ದೇವರು ಒರ್ವ ಒಳ್ಳೆಯ ಕುರುಬರಾಗಿದ್ದು ತನ್ನ ಬಳಗದಿಂದ ತಪ್ಪಿಹೋದ ಪ್ರತಿ ವ್ಯಕ್ತಿಯನ್ನು ಹುಡುಕಿ ಮತ್ತೆ ತನ್ನ ಬಳಗಕ್ಕೆ ಸೇರಿಸಿಕೊಳ್ಳುವುದರ ಮೂಲಕ ತನ್ನ ಅಗಾಧ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ. ಕ್ರೈಸ್ತರ ಜೀವನವೂ ಕೂಡ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಮುಖದಲ್ಲಿ ಸಂತೋಷದ ನಗುವನ್ನು ಕಾಣುವಂತಾಗಬೇಕು. ಪರರಿಗೆ ನಮ್ಮಿಂದಾಗುವ ಸಹಾಯಗಳನ್ನು ಮಾಡುವುದರೊಂದಿಗೆ ದೇವರ ನೈಜ ಪ್ರತಿನಿಧಿಯಾಗೋಣ ಎಂದರು.ಮಂಗಳವಾರ ನಡೆದ ಸಂಜೆಯ ಪ್ರಾರ್ಥನಾ ವಿಧಿಯನ್ನು ಮಂಗಳೂರಿನ ವಂ|ರುಡೋಲ್ಫ್ ರವಿ ಡೆಸಾ ನೆರವೇರಿಸಿ ಆಶೀರ್ವಚನ ನೀಡಿದರು.
ಉಡುಪಿ ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡಾ|ಜೆಬಿ ಸಲ್ಡಾನಾ ಸೇರಿದಂತೆ ಉಡುಪಿ ಹಾಗೂ ಇತರ ಧರ್ಮಪ್ರಾಂತ್ಯಗಳಿಂದ 40ಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದು, ಸಹಕರಿಸಿದ ಸರ್ವರಿಗೂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಧನ್ಯವಾದವನ್ನಿತ್ತರು.ಈ ವೇಳೆ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.
ವಾರ್ಷಿಕ ಮಹೋತ್ಸವದ ಪ್ರಯುಕ್ತ ಚರ್ಚಿನ ಐಸಿವೈಎಮ್ ಸಂಘಟನೆ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚರ್ಚಿನ ಕಲಾವಿದರಿಂದ ಕೊಂಕಣಿ ಹಾಸ್ಯಮಯ ನಾಟಕ ಪಪ್ಪಾಚೆಂ ಫೇವರಿಟ್ ಪ್ರದರ್ಶನಗೊಂಡಿತು.