ಸಾರಾಂಶ
ಭಕ್ತಿಯಿಂದ ಮುಕ್ತಿ ಕಂಡ ಅನೇಕ ಮಹಾತ್ಮರು, ಸಂತರು, ಶರಣರು ನಮ್ಮ ಪುರಾಣ, ಪುಣ್ಯ ಕಥೆಗಳಲ್ಲಿದ್ದಾರೆ
ಮುಂಡರಗಿ: ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿ ಸುಲಭವಾದ ಮಾರ್ಗವಾಗಿದ್ದು, ನಮ್ಮ ಭಕ್ತಿ ಶ್ರೇಷ್ಠವಾಗಿದ್ದರೆ ಭಗವಂತ ನಮಗೆ ಒಲಿಯುತ್ತಾನೆ.ಆದ್ದರಿಂದ ನಾವೆಲ್ಲರೂ ಭಕ್ತಿಯ ಮಾರ್ಗದಲ್ಲಿ ನಡೆಯಬೇಕು ಎಂದು ಕೇದಾರ ಹಾಗೂ ಮುಂಡರಗಿಯ ಹರಿ ಸಂಕೀರ್ಥನ ಮಠದ ಹರಿದಾಸ ಮಹಾರಾಜರು ಹೇಳಿದರು.
ಅವರು ಗುರುವಾರ ಪಟ್ಟಣದ ತುಂಗಭದ್ರಾ ನಗರ (ಹುಡ್ಕೋ ಕಾಲನಿ) ಆಯೋಜಿಸಿದ್ದ ಗುರುಪೌರ್ಣಿಮೆ ಹಾಗೂ ಗೋಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಭಕ್ತಿಯಿಂದ ಮುಕ್ತಿ ಕಂಡ ಅನೇಕ ಮಹಾತ್ಮರು, ಸಂತರು, ಶರಣರು ನಮ್ಮ ಪುರಾಣ, ಪುಣ್ಯ ಕಥೆಗಳಲ್ಲಿದ್ದಾರೆ. ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದ ಭಕ್ತಿ ಭಗವಂತನಿಗೆ ಪ್ರೀಯವಾಗಿದ್ದು, ನಾವೆಲ್ಲ ಅಂತಹ ಭಕ್ತಿ ಮೈಗೂಡಿಸಿಕೊಂಡು ಆ ಮೂಲಕ ಮೋಕ್ಷ ಪಡೆದುಕೊಳ್ಳಬೇಕು ಎಂದರು.
ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ ಮಾತನಾಡಿ, ನಮ್ಮ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಗುರು ನಮಗೆ ವಿದ್ಯಾದಾನ ಮಾಡುವುದರ ಜತೆಗೆ ನಮ್ಮನ್ನು ಭವ ಬಂಧನದಿಂದ ಪಾರು ಮಾಡುತ್ತಾನೆ. ಈ ಕಾರಣದಿಂದ ನಮ್ಮ ಪೂರ್ವಜರು ಹರ ಮುನಿದರೂ ಗುರು ಕಾಯುವನು ಎಂದು ನಂಬಿದ್ದರು. ತಂದೆ, ತಾಯಿ ಹಾಗೂ ಗುರು ನಾವು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.ಪ್ರಾರಂಭದಲ್ಲಿ ಹರಿದಾಸ ಮಹಾರಾಜರು ಹಾಗೂ ಭಕ್ತರು ಗೋಪೂಜೆ ಹಾಗೂ ತುಳಸಿ ಪೂಜೆ ನೆರವೇರಿಸಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲಾವಿದರು ಸಂಗೀತ ಸೇವೆ ನಡೆಸಿಕೊಟ್ಟರು. ಆಸ್ಟ್ರೇಲಿಯಾ, ಜರ್ಮನಿ, ದುಬೈ, ಮಹಾರಾಷ್ಟ್ರ ಮೊದಲಾದ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಹರಿದಾಸ ಮಹಾರಾಜರಿಗೆ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಅರ್ಕಸಾಲಿ, ಮಂಜುನಾಥ ಇಟಗಿ, ಅನಂತ ಚಿತ್ರಗಾರ, ಪವನ ಮೇಟಿ, ಶಿವಾನಂದ ಇಟಗಿ, ಕಾಶೀನಾಥ ಬಿಳಿಮಗ್ಗದ, ಅಗರವಾಲ್, ಜೀವನ್, ತ್ರಿಪಾಠಿ, ಪ್ರತೀಕ ಬಲ್ಲಾ, ಮಹಾಗಣಪತಿ ಬಿಳಿಮಗ್ಗದ, ನೇತ್ರಾವತಿ ಅರ್ಕಸಾಲಿ, ದಿವ್ಯಾ ಅರ್ಕಸಾಲಿ, ತಾರಾಬಾಯಿ ಚಿತ್ರಗಾರ, ಉಷಾ, ಮೋಹನ ಉಪಸ್ಥಿತರಿದ್ದರು.