ಓದುವುದು ಕೇವಲ ಉದ್ಯೋಗ ಮಾಡುವುದಕ್ಕಲ್ಲ. ಉದ್ಯೋಗಕ್ಕಾಗಿ ಅಲೆದಾಡಬಾರದು. ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರಬೇಕು. ಅಷ್ಟರ ಮಟ್ಟಿಗೆ ನೀವು ಕೌಶಲ್ಯ ಹೊಂದಿರಬೇಕು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಪರಿಶ್ರಮ ಇದ್ದರೆ ಭವಿಷ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು ಎಂದು ಉಪಲೋಕಾಯುಕ್ತ ನ್ಯಾ. ಡಾ. ಕೆ.ಎನ್. ಫಣೀಂದ್ರ ಅಭಿಪ್ರಾಯಪಟ್ಟರು.ನಗರದ ಶೃಂಗೇರಿ ಶಂಕರ ಮಠದಲ್ಲಿ ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ರಜತ ಮಹೋತ್ಸವ ಸಂಭ್ರಮ-2026, ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶ್ರದ್ಧೆ, ಶಿಸ್ತು, ಸಂಯಮ ಕಲಿಸಬೇಕು. ಈ ಎಲ್ಲವನ್ನು ಮಕ್ಕಳು ರೂಢಿಸಿಕೊಂಡರೆ ಬದುಕಿನಲ್ಲಿ ಉನ್ನತ ಮಟ್ಟ ತಲುಪುವುದರಲ್ಲಿ ಸಂದೇಹವಿಲ್ಲ ಎಂದರು.ವಿದ್ಯೆಗಿಂತ ಮಿಗಿಲಾದ ಸಂಪತ್ತಿಲ್ಲ. ಇದನ್ನು ಪ್ರತಿಯೊಬ್ಬ ಪೋಷಕರು, ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ತಾಯಿ ಮೊದಲ ಗುರು. ತಂದೆ ಉತ್ತಮ ಮಾರ್ಗದರ್ಶಕ. ತಂದೆ-ತಾಯಿ ಮಾರ್ಗದರ್ಶನವನ್ನು ಮಕ್ಕಳ ಸದಾ ಪಡೆಯುತ್ತಿರಬೇಕು. ಹಾಗೆಯೇ ತಂದೆ-ತಾಯಿಯು ಸಹ ಮಕ್ಕಳಿಗೆ ಪ್ರತಿ ಕ್ಷಣವೂ ಮಾರ್ಗದರ್ಶನ ಮಾಡಬೇಕು. ಹೆತ್ತವರ ಮಾರ್ಗದರ್ಶನ ಪಡೆದ ಮಕ್ಕಳು ಸಮಾಜದಲ್ಲಿ ಇಂದು ಬಹು ದೊಡ್ಡ ಸ್ಥಾನಕ್ಕೇರಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಏರೋನಾಟಿಕ್ಸ್ ಸಿಸ್ಟಂನ ಆಫೀಸ್ ಆಫ್ ಡೈರೆಕ್ಟರ್ ಜನರಲ್ ಡಾ ಟಿ.ಎನ್. ಸತೀಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಪರಿಶ್ರಮದಿಂದ ಮುಂದೆ ಬರಬೇಕು. ಓದುವ ಹಂತದಲ್ಲಿ ಬೇರೆ ವಿಚಾರಗಳಿಗೆ ಗಮನ ಹರಿಸಬಾರದು. ಕೇವಲ ಓದಿಗಷ್ಟೇ ಗಮನ ಇರಬೇಕು ಎಂದು ಹೇಳಿದರು.ಓದುವುದು ಕೇವಲ ಉದ್ಯೋಗ ಮಾಡುವುದಕ್ಕಲ್ಲ. ಉದ್ಯೋಗಕ್ಕಾಗಿ ಅಲೆದಾಡಬಾರದು. ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರಬೇಕು. ಅಷ್ಟರ ಮಟ್ಟಿಗೆ ನೀವು ಕೌಶಲ್ಯ ಹೊಂದಿರಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಮಾತನಾಡಿ, ಬ್ರಾಹ್ಮಣ ಸಮುದಾಯದ ನೌಕರರ ಕ್ಷೇಮಾಭಿವೃದ್ಧಿಗಾಗಿ ಕಳೆದ 25 ವರ್ಷಗಳ ಹಿಂದೆ ಈ ಸಂಘವನ್ನು ಸ್ಥಾಪಿಸಲಾಯಿತು. ಸಂಘದಲ್ಲಿ 2100 ನೌಕರರು ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ, ನಿವೃತ್ತ ಜಂಟಿ ನಿರ್ದೇಶಕ ಪ್ರಭಾಕರ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಚ್.ಆರ್. ಗಂಗಾಧರ್, ಕೆಪಿಟಿಎಲ್ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ನಿವೃತ್ತ ಕಾರ್ಯಪಾಲಕ ಕೆ.ವಿ. ರವಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕೆ. ಹನುಮಂತರಾವ್, ಸಂಘದ ಜಿಲ್ಲಾಧ್ಯಕ್ಷ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಎನ್. ನರೇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ, ಉಪಾಧ್ಯಕ್ಷ ಟಿ.ಪಿ. ನಟರಾಜು, ಖಜಾಂಚಿ ಎಚ್. ರಾಮಮೂರ್ತಿ ಸೇರಿ ನಿರ್ದೇಶಕರು, ತಾಲೂಕು ಸಂಚಾಲಕರು ಉಪಸ್ಥಿತರಿದ್ದರು.