ಸಾರಾಂಶ
ಪಂಚನಹಳ್ಳಿಯಲ್ಲಿ ಸಾಣೇಹಳ್ಳಿ ಶಿವ ಸಂಚಾರ ನಾಟಕ ತಂಡದ ಮೂರು ದಿನಗಳ ನಾಟಕೋತ್ಸವ
ಕನ್ನಡಪ್ರಭ ವಾರ್ತೆ, ಕಡೂರು.
ಸಾಹಿತ್ಯ ಮತ್ತು ನಾಟಕಗಳಿಂದ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಸಾಧ್ಯ ಎಂದು ಪಂಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವೆ ಮರುಳಪ್ಪ ಹೇಳಿದರು.ತಾಲೂಕಿನ ಪಂಚನಹಳ್ಳಿಯಲ್ಲಿ ಸಾಣೇಹಳ್ಳಿ ಶಿವ ಸಂಚಾರ ನಾಟಕ ತಂಡದಿಂದ ನಡೆದ ಮೂರು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುಗ ಬದಲಾದಂತೆ ಜನರು ಬದಲಾಗುತ್ತಿದ್ದು ಆರ್ಕೆಸ್ಟ್ರಾಕ್ಕೆ ಕೊಡುವಷ್ಟು ಮಹತ್ವವನ್ನು ನಾಟಕಗಳಿಗೆ ಕೊಡುತ್ತಿಲ್ಲ. ಸಾಣೇಹಳ್ಳಿ ಶಿವ ಸಂಚಾರ ನಾಟಕ ತಂಡ ಕಳೆದ ವರ್ಷ ಪಂಚನಹಳ್ಳಿಯಲ್ಲಿ ನಾಟಕ ಪ್ರದರ್ಶಿಸಿತ್ತು. ಅದೇ ರೀತಿ ಈ ವರ್ಷ ಕೂಡ ಪ್ರದರ್ಶನ ನೀಡುತ್ತಿದೆ. ಸಮಾಜವನ್ನು ಜಾಗೃತವಾಗಿಡುವ ನಿಟ್ಟಿನಲ್ಲಿ ನಾಟಕಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. ಪ್ರತೀ ವರ್ಷ ಪಂಚನಹಳ್ಳಿಯಲ್ಲಿ ನಾಟಕೋತ್ಸವ ಹಮ್ಮಿಕೊಂಡರೆ ಎಲ್ಲಾ ರೀತಿ ಸಹಕಾರ ನೀಡುವುದಾಗಿ ತಿಳಿಸಿದರು.
ಉಪನ್ಯಾಸಕ ಟಿ.ಎನ್.ಚನ್ನಬಸಪ್ಪ ಮಾತನಾಡಿ ಅಜ್ಞಾನ ಹೋಗಲಾಡಿಸಿ ಜ್ಞಾನದ ಬೆಳಕಿನತ್ತ ಸಾಗಲು ನಾಟಕಗಳು ಸಹಕಾರಿಯಾಗುತ್ತವೆ. 1977 ರಲ್ಲಿ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಶ್ರೀಗಳು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ 10 ವರ್ಷಗಳ ನಂತರ ಅಂದರೆ 1987 ರಲ್ಲಿ ಮಠದಲ್ಲಿ ಕಲಾ ಸಂಘ ಸ್ಥಾಪಿಸಿ ಆನಂತರ ರಂಗ ಶಾಲೆ ಆರಂಭಿಸುತ್ತಾರೆ. 10 ತರಗತಿ ನಂತರ ರಂಗ ಶಾಲೆಗೆ ಸೇರ್ಪಡೆಗೊಂಡು ಕೋರ್ಸ ಮುಗಿಸಿದರೆ ವಿದ್ಯಾರ್ಥಿಗಳಿಗೆ ಸರಕಾರದ ಮಾನ್ಯತೆಯಿರುವ ಪ್ರಮಾಣ ಪತ್ರ ದೊರೆಯುತ್ತದೆ. ವಿದ್ಯಾರ್ಥಿಗಳು ರಂಗ ಶಾಲೆಯಲ್ಲಿ ತರಬೇತಿ ಪಡೆಯುವ ಸಂದರ್ಭ ಕಲಿತ ನಾಟಕಗಳಲ್ಲಿ ಮೂರು ನಾಟಕ ಗಳನ್ನು ರಾಜ್ಯ,ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶಿಸುತ್ತಾರೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್.ರಂಗನಾಥ್ ಮಾತನಾಡಿ ಶಿವ ಸಂಚಾರ ನಾಟಕ ತಂಡದಿಂದ ಬುಧವಾರದಿಂದ ಮೂರು ದಿನಗಳ ಕಾಲ ತಾಳಿಯ ತಕರಾರು, ಜತೆಗಿರುವನು ಚಂದಿರ ಮತ್ತು ಕಲ್ಯಾಣದ ಬಾಗಿಲು ಎಂಬ ನಾಟಕಗಳ ಪ್ರದರ್ಶನ ನೀಡಲಿದ್ದಾರೆ ಎಂದರು.
ಗ್ರಾ.ಪಂ. ಹಿರಿಯ ಸದಸ್ಯ ಪಿ.ಎಂ.ಪಾಪಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಪಿಎಸ್ಐ ಶಾಯಿದ್ ಅಪ್ರಿಧಿ,ಗ್ರಾಪಂ ಉಪಾಧ್ಯಕ್ಷೆ ರೇಖಾ, ಪಿ.ಎಸ್.ಸಂತೋಷ್, ಟಿ.ಎನ್.ದಿನೇಶ್, ಕೆ.ಲೋಕೇಶ್, ಪಿ.ಎಂ.ಸತೀಶ್, ಪಿ.ಈ.ಸಂಜಯ್, ಪಿ.ರವಿ ಮತ್ತಿತರರಿದ್ದರು. 7ಕೆಕೆಡಿಯು2.ಸಾಣೇಹಳ್ಳಿ ಶಿವ ಸಂಚಾರ ನಾಟಕ ತಂಡದಿಂದ ಪಂಚನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕೋತ್ಸವವನ್ನು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ.ಪಾಪಣ್ಣ ಉದ್ಘಾಟಿಸಿದರು.