ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಹಿಂದೂ ಧರ್ಮವನ್ನು ನಿಶ್ಯಕ್ತಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಪಠ್ಯಪುಸ್ತಕ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅಭಿಪ್ರಾಯಪಟ್ಟರು.ಇಲ್ಲಿನ ರಾಷ್ಟ್ರೋತ್ಥಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಗಣಪತಿ ಭಟ್ ಅವರ ಶಂಕರ ಕೃತಿಯನ್ನು ಬಿಡುಗಡೆ ಮಾಡಿ, ವಿಕಸಿತ ಭಾರತದಲ್ಲಿ ನಮ್ಮ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕಾಗಿಯೇ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.
ಧರ್ಮಸ್ಥಳದ ಘಟನೆಯನ್ನು ಉಲ್ಲೇಖಿಸಿದ ಅವರು, ಯಾವುದೋ ಸಿನಿಮಾ ಕಥೆಯಂತೆ ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರಗೊಳಿಸುವ ಕೆಲಸ ನಡೆಯುತ್ತಿದ್ದರೂ ಹಿಂದೂಗಳು ಒಗ್ಗಟ್ಟಾಗಿ ಧ್ವನಿ ಎತ್ತದೆ ಇರುವುದು ವಿಷಾದನೀಯ ಸಂಗತಿ. ಹಿಂದೂ ನಾಯಕರು ಎನಿಸಿಕೊಂಡವರು ಪಾದಯಾತ್ರೆ, ಅಭಿಯಾನ ಮಾಡಲು ಮುಂದಾಗಿದ್ದಾರೆಯೆ ಹೊರತು ಯಾರೊಬ್ಬರೂ ಮುಸುಕುಧಾರಿಯ ವೃತ್ತಾಂತ ಏನು ಎಂದು ಪ್ರಶ್ನೆ ಮಾಡಿಲ್ಲ. ದೂರು ನೀಡುವವನ ಹಿನ್ನೆಲೆಯೇನು ಎಂದು ಪ್ರಶ್ನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿಕಸಿತ ಭಾರತ ಎಂದರೆ ಹಿಂದೂಗಳಿಗಾಗಿ ಇರುವ ಜಗತ್ತಿನ ಏಕೈಕ ರಾಷ್ಟ್ರ ಭಾರತವನ್ನು ರಕ್ಷಣೆ ಮಾಡಿಕೊಳ್ಳುವುದಾಗಿದೆ. ಜಗತ್ತಿನಲ್ಲಿ ಬೇರೆಬೇರೆ ಧರ್ಮದವರಿಗೆ ಅವರದ್ದೇ ಆದ ಧರ್ಮ ಪ್ರತಿಪಾದನೆ ಮಾಡಲು ರಾಷ್ಟ್ರಗಳಿವೆ. ಆಯಾ ಧರ್ಮದವರು ಇದು ನಮ್ಮ ಧರ್ಮ ಪ್ರತಿಪಾದಿಸುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ನಾವು ಹಿಂದುಗಳು, ಭಾರತ ನಮ್ಮ ದೇಶವೆಂದು ಧೈರ್ಯದಿಂದ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಇಂತಹ ನಿಶ್ಯಕ್ತ ಹಿಂದೂ ಸಮಾಜವನ್ನು ಇರಿಸಿಕೊಂಡು ೨೦೪೭ರಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ವಿಕಸಿತ ಭಾರತದ ಪರಿಕಲ್ಪನೆ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ಸ್ಥಿತಿ ಇದೆ ಎಂದು ಹೇಳಿದರು.
ಕೃತಿಕಾರ ಡಾ.ಗಣಪತಿ ಭಟ್ ಮಾತನಾಡಿ, ಶಂಕರಾಚಾರ್ಯರ ತತ್ವಗಳು, ಶ್ಲೋಕಗಳನ್ನು ನಮ್ಮ ಮಾತೃಭಾಷೆಯಲ್ಲಿ ಓದಬೇಕು ಎನ್ನುವವರಿಗೆ ಈ ಕೃತಿ ಹೆಚ್ಚು ಅನುಕೂಲಕರವಾಗಲಿದೆ. ಶಂಕರ ತತ್ವಗಳು ಸದಾ ನಮ್ಮನ್ನು ಸನ್ಮಾರ್ಗದಲ್ಲಿ ಸಾಗಿಸುತ್ತದೆ. ಶಂಕರಾಚಾರ್ಯರ ಸ್ತ್ರೋತ್ರ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿದ್ದು ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಯನ್ನು ಶಂಕರರು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ಸನಾನತ ಹಿಂದೂ ಧರ್ಮವನ್ನು ಸಂರಕ್ಷಿಸುವಲ್ಲಿ ಶಂಕರಾಚಾರ್ಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.ರಾಷ್ಟ್ರೋತ್ಥಾನ ಬಳಗದ ಮಾಜಿ ಅಧ್ಯಕ್ಷ ಪರಮೇಶ್ವರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷ ಎಸ್.ಆರ್.ಭಟ್ ಭಡ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಖಂಡಿಕಾ ಸ್ವಾಗತಿಸಿದರು. ಆರ್.ಎಸ್.ಗಿರಿ ಸನ್ಮಾನಪತ್ರ ವಾಚಿಸಿದರು. ಬಿ.ಜಿ.ಶ್ರೀಧರ್ ವಂದಿಸಿದರು. ಮಹೇಶ್ ನಿರೂಪಿಸಿದರು.