ಬಾಲ್ಯವಿವಾಹ ಪ್ರಕರಣಗಳು ಮರಕಳಿಸುತ್ತಿರುವುದು ವಿಷಾದನೀಯ

| Published : Feb 06 2025, 11:46 PM IST

ಸಾರಾಂಶ

ಬಾಲ್ಯವಿವಾಹ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗುತ್ತಿದ್ದರೂ ಬಾಲ್ಯವಿವಾಹ ಪ್ರಕರಣಗಳು ಮರಕಳಿಸುತ್ತಿರುವುದು ವಿಷಾದನೀಯ. ಮಕ್ಕಳ ಬಗ್ಗೆ ಪೋಷಕರು ಸದಾ ಎಚ್ಚರಿಕೆಯಿಂದ ಇದ್ದು, ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಾಲ್ಯವಿವಾಹ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗುತ್ತಿದ್ದರೂ ಬಾಲ್ಯವಿವಾಹ ಪ್ರಕರಣಗಳು ಮರಕಳಿಸುತ್ತಿರುವುದು ವಿಷಾದನೀಯ. ಮಕ್ಕಳ ಬಗ್ಗೆ ಪೋಷಕರು ಸದಾ ಎಚ್ಚರಿಕೆಯಿಂದ ಇದ್ದು, ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಪಂ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಹಂಗಳ ಗ್ರಾಪಂ ಸಹಯೋಗದಲ್ಲಿ ಬೇಟಿ ಬಚಾವೊ ಬೇಟಿ ಪಡಾವೋ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ರಕ್ಷಣೆ, ಬಾಲ್ಯವಿವಾಹ ಪದ್ದತಿ ನಿರ್ಮೂಲನೆ ಸಂಬಂಧ ಹೊಸ ಕಾನೂನು ಹಾಗೂ ಸುತ್ತೋಲೆಗಳು ಬರುತ್ತಿವೆ. ಆದರೂ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದು ಕಂಡು ಬರುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.

ಮಕ್ಕಳ ಭಾಗವಹಿಸುವಿಕೆ, ಮಾತನಾಡುವ, ಶಿಕ್ಷಣ ಇನ್ನು ಮುಂತಾದ ಹಕ್ಕುಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾಗಿದೆ. ಮೌಲ್ಯಗಳನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಸಮಾಜ ಮುಂದುವರೆಯುತ್ತಿದೆ. ಮಕ್ಕಳನ್ನು ಸಮಾಜದ ಸಭ್ಯ ಪ್ರಜೆಗಳಾಗಿ ರೂಪಿಸಬೇಕಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಸಣ್ಣ ವಯಸಿನ ಮಕ್ಕಳಿಗೆ ಮದುವೆ ಮಾಡುವುದು ಅಪರಾದ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಜೀವಾವಧಿವರೆಗೂ ಶಿಕ್ಷೆ ಇದೆ. ಈ ಎಲ್ಲ ಕಾನೂನುಗಳ ಮಾಹಿತಿಯನ್ನು ಪಡೆಯಬೇಕು. ಮಕ್ಕಳನ್ನು ರಕ್ಷಿಸಬೇಕು ಎಂದು ತಿಳಿಸಿದರು.

ಸಬ್‌ಇನ್ಸ್‌ಪೆಕ್ಟರ್ ಜಯರಾಂ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಮಾಡಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ದೂಡಬೇಡಿ. ಇದು ಕಾನೂನು ಪ್ರಕಾರ ಅಪರಾಧ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಾಲನ್ಯಾಯ ಮಂಡಳಿಯ ಮಾಜಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಉದ್ದೇಶ ಹೆಣ್ಣು ಶಿಶುಹತ್ಯೆ ತಡೆಯುವುದಾಗಿದೆ. ಪ್ರತಿ ಹೆಣ್ಣು ಮಗುವಿನ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು, ಹೆಣ್ಣು ಮಕ್ಕಳ ಲಿಂಗ ಅನುಪಾತದಲ್ಲಿನ ಕುಸಿತ ತಡೆಯುವುದು ಯೋಜನೆಯ ಮತ್ತೊಂದು ಪ್ರಮುಖ ಗುರಿಯಾಗಿದೆ ಎಂದರು.

ವಕೀಲ ರಾಜೇಶ್ ಮಾತನಾಡಿ, ಎಲ್ಲ ಕಾನೂನುಗಳು ಸಂವಿಧಾನ ಅಡಿಯಲ್ಲಿ ಜಾರಿಗೆ ಬರುತ್ತದೆ. ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ವೃಷಬೇಂದ್ರ, ಗೌರಮ್ಮ, ಚಿಕ್ಕತಾಯಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರುದ್ರವ್ವ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಮಲ್ಲಪ್ಪ ಇದ್ದರು.