ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜೀತ ಪದ್ಧತಿ ನಿಷೇಧ ಕಾಯಿದೆ ಜಾರಿಯಾಗಿ 49 ವರ್ಷಗಳಾದರೂ ಪರಿಸ್ಥಿತಿ ಬದಲಾಗದಿರುವುದು ವಿಷಾದನೀಯ ವಿಷಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ವಿಷಾದ ವ್ಯಕ್ತಪಡಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಬಾಗಲಕೋಟ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ಧತಿ (ರದ್ದತಿ) ನಿಷೇಧ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀತ ಪದ್ಧತಿ ನೀಷೇಧ ಕಾಯಿದೆಯನ್ನು 1976ರಲ್ಲಿಯೇ ಜಾರಿಗೊಳಿಸಲಾಗಿದ್ದು ಹತ್ತಿರ ಈಗ ಐವತ್ತು ವರ್ಷಗಳಾಗುತ್ತಾ ಬಂದರೂ ಜೀತ ಪದ್ಧತಿ ನಿಷೇಧ ಕಾಯಿದೆ ಕುರಿತು ಕಾರ್ಯಾಗಾರ ಅರಿವು ಮೂಡಿಸುವ ಕಾರ್ಯವಾಗುತ್ತಿದೆ ಎಂದರೆ ಪರಿಣಾಮಕಾರಿಯಾಗಿ ಜೀತ ಪದ್ಧತಿ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರ್ಥ. ಜಿಲ್ಲೆಯ ಅನೇಕ ಕಾರ್ಮಿಕರು ವಲಸೆ ಕಾರ್ಮಿಕರಾಗಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ಹೋಗಿ ಅಲ್ಲಿಯೇ ಬಂಧಿತ ಕಾರ್ಮಿಕರಾಗಿರುವುದು ಅಂಕಿ ಅಂಶಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಂದು ಆಯೋಜಿಸಿರುವ ಕಾರ್ಯಾಗಾರವನ್ನು ಕಾರ್ಮಿಕ ವರ್ಗದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಜೀತ ಪದ್ಧತಿ ಎನ್ನುವುದು ಅಮಾನುಷ, ಅಮಾನವೀಯ ಕಳಂಕ ಪದ್ದತಿ. ಅರ್ಧ ಶತಕವಾದರೂ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗದಿರುವುದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತಹ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಾಗಿದೆ. ಅಕ್ಷರಸ್ಥರಾಗಿ, ಅಧಿಕಾರಿಗಳಾಗಿದ್ದರೂ ಕೆಲವೊಂದು ಹೊಟೇಲ್‌ಗಳು ಮತ್ತು ಸ್ಥಳಗಳಲ್ಲಿ ಬಾಲ ಕಾರ್ಮಿಕರು, ಬಂದಿತ ಕಾರ್ಮಿಕರು ಕಂಡು ಬರುತ್ತಿದ್ದಾಗ ನೋಡಿಯೂ ನೋಡದಂತೆ ಬಂದಾಗ ನಾವು ಕೂಡ ಬಾಗಿದಾರರಾಗುತ್ತೇವೆ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಈ ಜೀತ ಪದ್ಧತಿ ನಿರ್ಮೂಲನೆಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್ ವಕೀಲರಾದ ಕ್ರಿಸ್ಠೋಫರ್ ಸೇನ್ವಿ, ಜೀತ ಕಾರ್ಮಿಕ ಪದ್ದತಿ ಹಾಗೂ ಮಾನವ ಕಳ್ಳ ಸಾಗಾಣಿಕೆ ಕುರಿತು ವಿವರಿಸಿ, ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ಧಥತಿ ಒಂದು ಅಪರಾಧವಾಗಿದೆ. ಜೀತ ಪದ್ದತಿ ನಿರ್ಮೂಲನೆ ಸಮಾಜದ ಕೈಯಲ್ಲಿದೆ. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಎಲ್ಲಾ ಹಂತದ ಅಧಿಕಾರಿಗಳ ಮೇಲಿದೆ. ಜೀತ ಮುಕ್ತರಿಗೆ ಪುನರ್ವಸತಿಯನ್ನು ಸರಿಯಾದ ಸಮಯದಲ್ಲಿ ನೀಡಿದಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ. ಕಾರ್ಮಿಕ ನೀತಿಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನ ಮಾಡಿದಲ್ಲಿ ಜೀತ ಪ್ರಕರಣಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಎಜಿಎಂ ಸಂಸ್ಥೆಯ ಮುಖ್ಯಸ್ಥ ಏಸು ಫಾಧಂ ಅವರು ಜೀತ ಕಾರ್ಮಿಕರ ಪುನರ್ವಸತಿ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿ ರಮೇಶ ಸುಂಬಡ ಸೇರಿದಂತೆ ಇತರರು ಇದ್ದರು.