ಸತತ 100 ದಿನ ನೀರು ಹರಿಸಲು ಸೂಚಿಸುವೆ

| Published : Oct 13 2023, 12:16 AM IST

ಸಾರಾಂಶ

ಭದ್ರಾ ಡ್ಯಾಂ ಅಚ್ಚುಕಟ್ಟು ರೈತರಿಗೆ ಡಿಸಿಎಂ ಡಿಕೆಶಿ ಭರವಸೆ । ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನೇತೃತ್ವದ ನಿಯೋಗದ ಮನವಿಗೆ ಸ್ಪಂದನೆ

ಭದ್ರಾ ಡ್ಯಾಂ ಅಚ್ಚುಕಟ್ಟು ರೈತರಿಗೆ ಡಿಸಿಎಂ ಡಿಕೆಶಿ ಭರವಸೆ । ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನೇತೃತ್ವದ ನಿಯೋಗದ ಮನವಿಗೆ ಸ್ಪಂದನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಸತತವಾಗಿ 100 ದಿನಗಳ ಕಾಲ ನೀರು ಹರಿಸುವಂತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನೇತೃತ್ವದ ನಿಯೋಗದ ಮನವಿಗೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಬೆಳಿಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿಯಾದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್‌ ನೇತೃತ್ವದ ಜಿಲ್ಲೆಯ ರೈತ ಮುಖಂಡರು, ಅಚ್ಚುಕಟ್ಟು ರೈತರಿಂದ ಮನವಿ ಸ್ವೀಕರಿಸಿ, ನಾಲೆಗಳಿಗೆ ಭದ್ರಾ ಡ್ಯಾಂನಿಂದ ಸತತವಾಗಿ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಭದ್ರಾ ಡ್ಯಾಂನಿಂದ ನಾಲೆಗಳಿಗೆ ಆ.10ರಿಂದ ಸತತ 100 ದಿನಗಳ ಕಾಲ ನೀರು ಹರಿಸಲು ಭದ್ರಾ ಯೋಜನಾ ಸಲಹಾ ಸಮಿತಿ ಸಭೆ ತೀರ್ಮಾನಿಸಿತ್ತು. ಅದೇ ನಂಬಿಕೆ ಮೇಲೆ ಅಚ್ಚುಕಟ್ಟು ರೈತರು ಭತ್ತ ನಾಟಿ ಮಾಡಿದ್ದರು. ಈಗಾಗಲೇ ಭತ್ತ ಹೂವಾಗುವ ಸ್ಥಿತಿಯಲ್ಲಿದೆ. ಈಗ ನಾಲೆಯಲ್ಲಿ ನೀರು ನಿಲ್ಲಿಸುವ ತೀರ್ಮಾನ ಕೈಗೊಂಡರೆ ಅಚ್ಚುಕಟ್ಟು ರೈತರಿಗೆ ತೀವ್ರ ಅನಾನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ನಾಲೆಯಲ್ಲಿ ನೀರು ನಿಲ್ಲಿಸಬಾರದು. ಹಿಂದಿನ ತೀರ್ಮಾನದಂದೆ 100 ದಿನ ಸತತವಾಗಿ ನೀರು ಹರಿಸಿ, ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ಜಲಾಶಯದ ನೀರಿನಲ್ಲೇ ಸುಮಾರು 1.5 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆಫ್ ಅಂಡ್ ಆನ್‌ ಪದ್ಧತಿಯಂತೆ 20 ದಿನ ನೀರು ಬಿಡುವುದು, 10 ದಿನ ನೀರು ನಿಲ್ಲಿಸುವುದು ಮೊದಲು ತಡೆ ಹಿಡಿಯಿರಿ. ಇಂತಹ ನಿರ್ಧಾರದಿಂದ ನಿರಂತರ ನೀರು ಬೇಡುವ ಭತ್ತದ ಬೆಳೆಗಳಿಗೆ ಹಾನಿಯಾಗಲಿದೆ. ರೈತರು ಸಾಲಮಾಡಿ, ಭತ್ತ ಬೆಳೆದಿದ್ದಾರೆ. ಆಫ್ ಅಂಡ್ ಆನ್‌ ಪದ್ಧತಿ ರದ್ದುಪಡಿಸಿ, ತಕ್ಷಣವೇ 100 ದಿನಗಳ ಕಾಲ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಅಚ್ಚುಕಟ್ಟು ರೈತರಿಗೆ ಭರವಸೆ:

ಮನವಿ ಸ್ವೀಕರಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿ, ಭದ್ರಾ ಜಲಾಶಯದ ಅಚ್ಚುಕಟ್ಟು ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಈ ಹಿಂದಿನ ತೀರ್ಮಾನದಂತೆಯೇ 100 ದಿನಗಳ ಕಾಲ ನಾಲೆಗಳಿಗೆ ನೀರು ಬಿಡಲು ಸೂಚನೆ ನೀಡುತ್ತೇನೆ. ಶಿವಮೊಗ್ಗ ಉಸ್ತುವಾರಿ ಸಚಿವ, ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನರಿಗೂ ನಿರಂತರ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುವೆ ಎಂದು ಸಂಸದ ಸಿದ್ದೇಶ್ವರ, ರೈತ ಮುಖಂಡರು, ಅಚ್ಚುಕಟ್ಟು ರೈತರಿಗೆ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಮೋರ್ಚಾದ ರಾಜ್ಯ ಸಮಿತಿಯ ಬಿ.ಎಂ.ಸತೀಶ ಕೊಳೇನಹಳ್ಳಿ, ಎಂಎಲ್‌ಸಿ ನವೀನ, ಶ್ಯಾಗಲೆ ದೇವೇಂದ್ರಪ್ಪ, ಧನಂಜಯ ಕಡ್ಲೇಬಾಳು, ಬಾತಿ ವೀರೇಶ ದೊಗ್ಗಳ್ಳಿ, ಬಾತಿ ಬಿ.ಕೆ.ಶಿವಕುಮಾರ ಇತರರಿದ್ದರು. ........................

.