ಮಾದಿಗ ಸಮುದಾಯ ಶೋಷಣೆಗೆ ಈಡು ಮಾಡಿದ್ದೇ ಕಾಂಗ್ರೆಸ್‌

| Published : Apr 18 2024, 02:18 AM IST

ಮಾದಿಗ ಸಮುದಾಯ ಶೋಷಣೆಗೆ ಈಡು ಮಾಡಿದ್ದೇ ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ನಗರದ ವಾಸವಿ ಮಹಲ್‌ನಲ್ಲಿ ದಲಿತ ಸಮುದಾಯಗಳು ಹಮ್ಮಿಕೊಂಡಿದ್ದ ಚುನಾವಣಾ ಜಾಗೃತಿ ಸಮಾವೇಶವನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಭವ್ಯ ಭಾರತದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲೂ ಸಹ ಶೋಷಿತ, ದಲಿತ ಸಮುದಾಯಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ದುಸ್ಥಿತಿ ನಮ್ಮಲ್ಲಿದೆ. ರಾಷ್ಟ್ರವನ್ನು ಬಹುವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಯಾವುದೇ ಸೌಲಭ್ಯ ನೀಡದೆ ವಂಚಿಸಿದೆ. ವಿಶೇಷವಾಗಿ ಮಾದಿಗ ಒಳಮೀಸಲಾತಿ ನೀಡಲು ಪ್ರಸ್ತುತ ಎಐಸಿಸಿ ಅಧ್ಯಕ್ಷ, ಮಾದಿಗ ಸಮುದಾಯದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರೇ ಅಡ್ಡಿಯಾಗಿದ್ದಾರೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣಮಾದಿಗ ಆರೋಪಿಸಿದರು.

ಅವರು, ಗುರುವಾರ ನಗರದ ವಾಸವಿ ಮಹಲ್‌ನಲ್ಲಿ ದಲಿತ ಸಮುದಾಯಗಳು ಹಮ್ಮಿಕೊಂಡಿದ್ದ ಚುನಾವಣಾ ಜಾಗೃತಿ ಸಮಾವೇಶವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಮಾದಿಗ ಸಮುದಾಯದ ಸಂಘಟನೆಗಳ ನೇತಾರರು, ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ತಮ್ಮ ಒಂದು ಗಂಟೆ ಸುಧೀರ್ಘ ಭಾಷಣದಲ್ಲಿ ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ಪಟ್ಟಿಯನ್ನು ಮಾಡಿದ ಅವರು, ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಮಾದಿಗ ಮೀಸಲಾತಿ ಹೋರಾಟ ಸಮಿತಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹೋರಾಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ, ಈ ಬಾರಿ ಲೋಕಸಭಾ ಚುನಾವಣೆ ನಂತರ ಮಾದಿಗ ಒಳಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದಾರೆ ಎಂದರು.

ದೇಶದ ಇತಿಹಾಸದಲ್ಲಿ ಪ್ರಧಾನಮಂತ್ರಿಗಳು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಬೇಡಿಕೆ ಬಗ್ಗೆ ಮಾಹಿತಿ ಪಡೆದು ನಾನು ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪ ಮಾಡುವ ಮುನ್ನವೇ ನನಗೆ ಈ ಭರವಸೆ ನೀಡಿದರು. ಆದ್ದರಿಂದ ನಾನು ಮೋದಿಯವರ ಆಡಳಿತವನ್ನು ಮುಕ್ತಕಂಠದಿಂದ ಹೇಳುತ್ತೇನೆ. ನನ್ನ ಸಮುದಾಯ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಲು ಮತದಾನದ ಮೂಲಕ ಬೆಂಬಲಿಸುವಂತೆ ಮನವಿ ಮಾಡುತ್ತೇನೆಂದರು.

ಈ ಹಿಂದೆ ರಾಜ್ಯದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಮ್ಮ ಜನಾಂಗಕ್ಕೆ ಅವಶ್ಯವಿರುವ ಒಳಮೀಸಲಾತಿ ಬಗ್ಗೆ ಮನವಿ ಮಾಡಿದಾಗ ತಡಮಾಡದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ. ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ನೋವಿನ ಬಗ್ಗೆ ಉದಾರ ಮನೋಭಾವನೆ ಹೊಂದಿದೆ. ಈ ಜನಾಂಗದ ಅಭಿವೃದ್ಧಿ ಕನಸನ್ನು ನನಸು ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ನಮ್ಮ ಜನಾಂಗದ ಹಿರಿಯ ನಾಯಕ ಗೋವಿಂದ ಎಂ.ಕಾರಜೋಳ ಸ್ಪರ್ಧಿಸಿದ್ದು, ಅವರಿಗೆ ಎಲ್ಲರೂ ತಪ್ಪದೆ ತಮ್ಮ ಮತವನ್ನು ನೀಡಿ ಅವರ ಗೆಲುವಿನ ರೂವಾರಿಗಳಾಗಬೇಕು ಎಂದರು.

ಕಾಂಗ್ರೆಸ್ ಪಕ್ಷವೂ ಸೇರಿ ಹಲವಾರು ವಿರೋಧ ಪಕ್ಷಗಳು, ವಿಶೇಷವಾಗಿ ಇಂಡಿಯಾ ಒಕ್ಕೂಟ ಬಿಜೆಪಿ ಮತ್ತು ಪ್ರಧಾನಮಂತ್ರಿ ಟೀಕಿಸುತ್ತಾ ಬಂದಿವೆ. ಬಿಜೆಪಿ ಪರಿಶಿಷ್ಟ ಜಾತಿ, ಪರಿಶಷ್ಟ ಪಂಗಡ, ಹಿಂದುಳಿದ ವರ್ಗ, ಮುಸ್ಲಿಂ ಸಮುದಾಯದ ವಿರೋಧಿಗಳೆಂದು ಸುಳ್ಳು ಪ್ರಚಾರ ಮಾಡುತ್ತಾರೆ. ಆದರೆ, ಅಬ್ದುಲ್‌ ಕಲಾಂರವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ದಲಿತ ಸಮುದಾಯದ ಹಿರಿಯ ನೇತಾರ ಕೋವಿಂದ್‌ರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ, ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಈ ದೇಶದ ಅತಿ ಉನ್ನತ್ತ ಸ್ಥಾನಗಳಿಗೆ ಬಿಜೆಪಿ ದಲಿತ, ಬುಡಕಟ್ಟು ಸಮುದಾಯಕ್ಕೆ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮೀಸಲಾತಿ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ಮಾದಿಗ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ನಾನು ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ದೇಶದ ಜನತೆಗೆ ಉತ್ತಮ ಆಡಳಿತ ನೀಡಬೇಕು. ದೇಶದ ಸುಭದ್ರತೆಗೆ ದಕ್ಷ ವ್ಯಕ್ತಿ ಅವಶ್ಯಕತೆ ಇದೆ. ರಾಷ್ಟ್ರವನ್ನು ಮುನ್ನಡೆಸುವ ಮಹಾನ್ ನಾಯಕವೆಂದರೆ ಅದು ನರೇಂದ್ರಮೋದಿ ಮಾತ್ರ. ಆದ್ದರಿಂದ ನಮ್ಮ ಮೀಸಲಾತಿ ಹೋರಾಟ ಸಮಿತಿ ರಾಜ್ಯದೆಲ್ಲೆಡೆ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳನ್ನು ಚುನಾವಣೆಗೆ ಬೆಂಬಲಿಸಿ ಗೆಲ್ಲಿಸುವಂತೆ ಸಮುದಾಯಕ್ಕೆ ಮನವಿ ಮಾಡುತ್ತಿದ್ದೇವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಟ್ಟೆಪ್ಪನಹಳ್ಳಿ ಕಾಂತ್‌ರಾಜ್ ವಹಿಸಿದ್ದರು. ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಮಾಜಿ ಕಾರ್ಯದರ್ಶಿ ಜಯಪಾಲಯ್ಯ, ಪರಜಿತ ಅಭ್ಯರ್ಥಿ ಅನಿಲ್‌ಕುಮಾರ್, ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎಂ.ರವೀಶ್‌ಕುಮಾರ್, ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಎಚ್.ಆನಂದಪ್ಪ, ನಗರಸಭಾ ಸದಸ್ಯ ವಿ.ವೈ.ಪ್ರಮೋದ್, ಚನ್ನಿಗರಾಮಯ್ಯ, ಕಲಮರಹಳ್ಳಿಶಿವಣ್ಣ, ಮಾರುತಿ, ಎಂ.ಇಂದ್ರೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.