ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ. ಅವು ಮನುಷ್ಯನ ಜೀವನಕ್ಕೆ ಆಧ್ಯಾತ್ಮಿಕ ನೆಮ್ಮದಿ ನೀಡುವ ಹಾಗೂ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ.
ಕನ್ನಡಪ್ರಭ ವಾರ್ತೆ ನರೇಗಲ್ಲ
ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ. ಅವು ಮನುಷ್ಯನ ಜೀವನಕ್ಕೆ ಆಧ್ಯಾತ್ಮಿಕ ನೆಮ್ಮದಿ ನೀಡುವ ಹಾಗೂ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ. ಆದ್ದರಿಂದ ದೇವಾಲಯಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳ ಪಾವಿತ್ರ್ಯ, ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಮೀಪದ ಮಜರೆ ಮಲ್ಲಾಪೂರ ಗ್ರಾಮದಲ್ಲಿ ಲಕ್ಷ್ಮೀ ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಹಾಗೂ ಗದ್ದುಗೆಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಮಠ-ಮಂದಿರಗಳು ಮನುಷ್ಯ ಜೀವನದ ಶಾಶ್ವತ ಅಲಂಕಾರವಾಗಿವೆ. ಬಟ್ಟೆ, ಆಭರಣ ಹಾಗೂ ಭೌತಿಕ ವಸ್ತುಗಳು ಒಂದು ಕಾಲಕ್ಕೆ ಮಾತ್ರ ಸೌಂದರ್ಯ ನೀಡಬಹುದು. ಆದರೆ ಭಕ್ತಿ, ಸಂಸ್ಕಾರ ಹಾಗೂ ಸತ್ಕಾರ್ಯಗಳು ಜೀವನಕ್ಕೆ ಶಾಶ್ವತ ಗೌರವ ತಂದುಕೊಡುತ್ತವೆ. ದೇವ ಮಂದಿರ, ಭಜನೆ, ಪೂಜೆ, ಪ್ರಸಾದಗಳು ಜೀವನದ ಅಲಂಕಾರ ಎಂಬ ಡಿವಿಜಿಯವರ ಆಶಯದಂತೆ ದೇವಾಲಯಗಳು ಬದುಕಿಗೆ ಮೌಲ್ಯವನ್ನು ನೀಡುತ್ತವೆ ಎಂದು ತಿಳಿಸಿದರು.ದೇವಾಲಯ ನಿರ್ಮಾಣವಾದ ನಂತರ ಅದರ ಪಾವಿತ್ರ್ಯ ಕಾಪಾಡುವುದು ಇನ್ನಷ್ಟು ಮುಖ್ಯ. ದೇವಸ್ಥಾನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ದೇವಾಲಯದೊಳಗೆ ಭಕ್ತರು ಶಿಸ್ತು ಮತ್ತು ಸಂಯಮದಿಂದ ನಡೆದುಕೊಳ್ಳಬೇಕು. ದೇವಾಲಯದ ಆಚರಣೆಗಳು ಹಾಗೂ ಪೂಜಾ ವಿಧಿವಿಧಾನಗಳಿಗೆ ಆಗಮ ಶಾಸ್ತ್ರಗಳಲ್ಲಿ ನಿರ್ದಿಷ್ಟ ಮಾರ್ಗದರ್ಶನವಿದ್ದು, ಅವುಗಳನ್ನು ಗೌರವದಿಂದ ಪಾಲಿಸಬೇಕು ಎಂದರು.
ಸಮ್ಮುಖ ವಹಿಸಿದ್ದ ನಿಡಗುಂದಿಕೊಪ್ಪ ಶಾಖಾ ಶಿವಯೋಗದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿದರು.ಈ ವೇಳೆ ಬಸನಗೌಡ ಮಲ್ಲನಗೌಡ್ರ, ರುದ್ರಗೌಡ ಮಲ್ಲನಗೌಡ್ರ, ವೀರಣ್ಣ ಶಿರಹಟ್ಟಿ, ಮಲ್ಲಿಕಾರ್ಜುನ ಭೂಮನಗೌಡ್ರ, ವೀರಯ್ಯ ತಿರಕನಗೌಡ್ರ, ಹಜೆರೆಸಾಬ ನದಾಫ್, ಮಲ್ಲನಗೌಡ ಮಲ್ಲನಗೌಡ್ರ, ಸುರೇಶಗೌಡ ಮಲ್ಲನಗೌಡ್ರ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಬಾಪುಗೌಡ ಮಲ್ಲನಗೌಡ್ರ ಸೇರಿದಂತೆ ಗ್ರಾಮದ ಮುಖಂಡರು, ಭಕ್ತರು, ಮಹಿಳೆಯರು ಇದ್ದರು.