ಪ್ರತಿಭೆ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ

| Published : Jun 17 2024, 01:34 AM IST

ಪ್ರತಿಭೆ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರದ್ಧೆಯಿಂದ ವಿದ್ಯೆ ಕಲಿತು ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪೋಷಕರು ತೋರಿಸುವ ಮಮತೆ ಎಷ್ಟು ಮುಖ್ಯವೋ, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವುದು ಕೂಡ ಅಷ್ಟೇ ಮುಖ್ಯ. ಅದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ಭಾರತ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರದ್ಧೆಯಿಂದ ವಿದ್ಯೆ ಕಲಿತು ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪೋಷಕರು ತೋರಿಸುವ ಮಮತೆ ಎಷ್ಟು ಮುಖ್ಯವೋ, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವುದು ಕೂಡ ಅಷ್ಟೇ ಮುಖ್ಯ. ಅದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ಭಾರತ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ್‌ ತಿಳಿಸಿದರು.

ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟೇಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಗೀತೆಗೊಂದು ಗಿಡ ವಿಶ್ವ ಪರಿಸರ ದಿನಾಚರಣೆ ಹಾಗೂ ಸಖಿ ಸ್ವಾವಲಂಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವಂತೆಯೇ ಪ್ರತಿ ಸಂಸ್ಥೆಗಳಿಗೂ ಸಹಕಾರ ನೀಡಬೇಕಾಗಿರುವುದು ಸಾರ್ವಜನಿಕರ ಕರ್ತವ್ಯವೂ ಆಗಿರುತ್ತದೆ. ಜೊತೆಗೂಡಿ ಕೆಲಸ ಮಾಡಿದಾಗಲೇ ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದರು.

ಪ್ರಕೃತಿಯೊಂದಿಗಿನ ಮಾನವನ ಸಂಬಂಧ ಅವಿನಾಭಾವ, ಪ್ರತಿ ಗಿಡವೂ ತನ್ನದೇ ಆದ ಮಹತ್ವವನ್ನು ಪಡೆದಿರುತ್ತದೆ, ಹಸಿರನ್ನು ಉಳಿಸಿ ಬೆಳೆಸುವಂತೆ ಮಕ್ಕಳಿಗೆ ಹಿರಿಯರು ಕಲಿಸಲೇ ಬೇಕಿದೆ. ಒಬ್ಬ ಧೂಮ್ರಪಾನಿ ಬೀಡಿ- ಸಿಗರೇಟು ಸೇದಿ ಪರಿಸರ ನಾಶ ಮಾಡುವುದಲ್ಲದೇ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ. ಇಂತಹ ಪರಿಸರ ವಿನಾಶಕಾರಿ ಕೃತ್ಯಗಳಿಂದ ಮಕ್ಕಳು ದೂರವಿರಬೇಕು ಎಂದು ಅವರು ಕಿವಿಮಾತು ಹೇಳಿದರು.

ಬದುಕಿನ ಭದ್ರ ಬುನಾದಿಗೆ ವಿದ್ಯೆ ಅವಶ್ಯಕ. ಅಂಕವೊಂದೇ ಗುರಿಯಾಗದಿದ್ದರೂ ಅಂಕಕ್ಕೆ ಇಂದು ಅಷ್ಟೇ ಮಹತ್ವ ಇದ್ದೇ ಇದೆ. ಉತ್ತಮ ನಾಗರಿಕರಾಗಲು ವಿದ್ಯೆ ಮಹತ್ವದ್ದಾಗಿದೆ. ಸಾಮಾಜಿಕ ಬದುಕಿನಲ್ಲಿ ಉನ್ನತ ಸ್ಥಾನ ಕಲ್ಪಿಸಲು ವಿದ್ಯೆಯು ಅತ್ಯಂತ ಅವಶ್ಯಕ ಎಂದರು.

ಬಳಿಕ 2023- 24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಾಮಕೃಷ್ಣನಗರ 58ನೇ ವಾರ್ಡಿನ 52 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಹಾಡು ಹೇಳಿದ ಪರಿಸರ ಪ್ರೇಮಿಗಳಿಗೆ ಗಿಡ ನೀಡಲಾಯಿತು. ಸಖಿ ಸ್ವಾವಲಂಬಿ ಯೋಜನೆಯಡಿ ಮಾಂಟೆಸರಿ ಶಿಕ್ಷಕರ ತರಬೇತಿ ಪಡೆದ 15 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟೇಬಲ್ ಟ್ರಸ್ಟ್‌ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್, ಭಾರತೀಯ ಜೈನ್ ಸಂಘಟನೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಸ್ವರಾಜ್ ಜೈನ್, ಶ್ರೀ ಕಾಮಧೇನು ಅಸೋಸಿಯೇಷನ್‌ ಮಾಲೀಕ ಆರ್.ಕೆ. ಮಂಜು ಮೊದಲಾದವರು ಇದ್ದರು.