ನರಗುಂದ: ಜ್ಞಾನ ಸಂಜೀವಿನಿ ನೀಡುವ ಶಕ್ತಿ ಗುರುಗಳಲ್ಲಿ ಮಾತ್ರ ಸಿಗಲು ಸಾಧ್ಯ. ಕಲಿಸಿದ ಗುರುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಪತ್ರಿವನ ಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ತಾಲೂಕಿನ ಚಿಕ್ಕನರಗುಂದ ಗ್ರಾಮದ ಡಿ.ಎಸ್. ಕೆಂಚನಗೌಡ್ರ ಪ್ರೌಢಶಾಲೆಯ 2002- 2003ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಎಂದರೇ ಬೆಳಕು. ಅದಕ್ಕೆ ಗುರುಗಳನ್ನು ಜ್ಞಾನಸೂರ್ಯ ಎಂದು ಕರೆಯುತ್ತಾರೆ. ಸೂರ್ಯ ಬಂದ ಕೂಡಲೆ ಕತ್ತಲೆ ಸಹಜವಾಗಿ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹ ಆದ ಕೂಡಲೇ ಅಜ್ಞಾನ ತಾನಾಗಿಯೇ ನಿವಾರಣೆಯಾಗಿ ಸುಜ್ಞಾನ ಪಸರಿಸುತ್ತದೆ ಎಂದರು.

ಉಪನ್ಯಾಸಕ ಎಸ್.ವಿ. ದಂಡನಾಯ್ಕರ ಮಾತನಾಡಿ, ಎಲ್ಲರನ್ನು ಸಮದೃಷ್ಟಿಯಿಂದ ನೋಡುತ್ತಾ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಿಜಕ್ಕೂ ಸತ್ಕಾರ್ಯವೇ ಸರಿ ಎಂದರು. ನಿವೃತ್ತ ಶಿಕ್ಷಕ ಎಚ್.ಎ. ಮುದಿಯಪ್ಪನವರ ಮಾತನಾಡಿ, 2002- 2003ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ ಎಂದರು..

ಎಸ್.ಎಸ್. ಕಂದಗಲ್ಲ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಜಗತ್ತಿನಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಜೀವನ ರೂಪಿಸಿಕೊಳ್ಳಲು ಶಿಕ್ಷಣವನ್ನು ಕೊಟ್ಟವರು ಗುರುಗಳು ಎಂದರು.


ರೇಣುಕಾ ಹೂಲಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಹಳೆ ವಿದ್ಯಾರ್ಥಿಗಳಾದ ಮಹಾಂತೇಶ ಹಲಗೌಡ್ರ, ನಿರ್ಮಾಲಾ ಹನಸಿ, ಗೀತಾ ಕಂಬಳಿ, ರವಿ ತಳವಾರ, ಹನುಮಂತ ಮೇಟಿ ಅವರು ಅನಿಸಿಕೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ಲಕ್ಷ್ಮೇಶ್ವರ: ಸಮಾಜ ಬದಲಾವಣೆಯ ಕನಸು ಕಾಣುವುದು ಸುಲಭ. ಆದರೆ ಕಂಡ ಕನಸನ್ನು ಸಾಕಾರಗೊಳಿಸಲು ಮಾಡುವ ಪ್ರಯತ್ನ ಅಷ್ಟೇನೂ ಸುಲಭವಾಗಿರುವುದಿಲ್ಲ ಎಂದು ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ತಿಳಿಸಿದರು.ಸೋಮವಾರ ಪಟ್ಟಣದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಕಮಲಮ್ಮ ವಿ. ಅಗಡಿ ಅವರ 88ನೇ ಜನ್ಮದಿನದ ಅಂಗವಾಗಿ ಎನ್ಎಸ್ಎಸ್ ಘಟಕ ಹಾಗೂ ಅದ್ವಿತಾ ಲೇಡಿಸ್ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಮಹಾದಾಸೆಯಿಂದ ಲಕ್ಷ್ಮೇಶ್ವರದಲ್ಲಿ ಕಮಲಾ ಮತ್ತು ವೆಂಕಪ್ಪ ಎಂ. ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಸ್ಥಾಪಿಸುವಲ್ಲಿ ದಿವಂಗತ ವೆಂಕಪ್ಪ ಎಂ.ಅಗಡಿಯವರಿಗೆ ಬೆನ್ನೆಲುಬಾಗಿ ನಿಂತು ಅವರ ಕನಸು ಸಾಕಾರಗೊಳಿಸಿದವರು ಅವರ ಪತ್ನಿ ಕಮಲಮ್ಮ ವಿ. ಅಗಡಿ ಎಂದರು.

ಈ ವೇಳೆ ಮುಖ್ಯ ಆಡಳಿತ ಅಧಿಕಾರಿ ಪ್ರೊ. ವಿಕ್ರಂ ಶಿರೋಳ, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಸುಭಾಸ ಮೇಟಿ, ಡಾ. ಆರ್.ಎಂ. ಪಾಟೀಲ, ಪ್ರೊ. ರವಿ ಪ್ರಕಾಶ, ಪ್ರೊ. ಪ್ರಕಾಶ ಹೊಂಗಲ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ರಾಜೇಶ್ವರಿ ಗಾಮನಗಟ್ಟಿ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಇದ್ದರು.ಪ್ರೊ. ಸಾವಿತ್ರಿ ವಾಲಿ ಸ್ವಾಗತಿಸಿದರು. ಪ್ರೊ. ಕಿರಣ್ ಕೋತಿನ ವಂದಿಸಿದರು. ವಿದ್ಯಾರ್ಥಿ ಸಾನಿಯಾ, ಸುಚಿತ್ರಾ, ಸವಿತಾ, ರಮೇಶರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.