ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಪಾಲಕರ ಕರ್ತವ್ಯ

| Published : Sep 15 2024, 01:47 AM IST

ಸಾರಾಂಶ

ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಪಾಲಕರ ಕರ್ತವ್ಯ

ಕನ್ನಡಪ್ರಭ ವಾರ್ತೆ ತುಮಕೂರು ಮನೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರ ಸಿಕ್ಕಾಗ ಅದು ಸಮಾಜದಲ್ಲಿ ಪ್ರತಿಬಿಂಬಿಸುತ್ತದೆ. ಆದ್ದರಿಂದ ಪೋಷಕರು ಅದರಲ್ಲೂ ತಾಯಿಯಾದವಳು ಸದ್ವಿಚಾರ, ಸಚ್ಚಿಂತನೆಗಳಿಂದ ಮಕ್ಕಳನ್ನು ಮಾದರಿಯಾಗುವಂತೆ ರೂಪಿಸುವ ಬಹುದೊಡ್ಡ ಹೊಣೆಗಾರಿಕೆ ಹೊಂದಿದ್ದಾಳೆ ಎಂದು ಭೀಮನಕಟ್ಟೆ ಮಠಾಧೀಶ ರಘುವರೇಂದ್ರತೀರ್ಥ ಶ್ರೀಪಾದಂಗಳು ಹೇಳಿದರು.ನಗರದಲ್ಲಿ ಮಹಿಳಾ ಸಮಾಜ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ಧಾರ್ಮಿಕ ಪ್ರಜ್ಞೆಯನ್ನು ಹೊಂದಿದರೆ ಆ ಮನೆಯೇ ದೇವಾಲಯವಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಸಂಸ್ಕಾರವೇ ಮುಂದೆ ಅದು ಹೆಮ್ಮರವಾಗಿ ಬೆಳೆಯುತ್ತದೆ. ಯಾವಾಗ ಸಂಸ್ಕಾರಹೀನ ಮಕ್ಕಳು ಬರುತ್ತಾರೋ ಸಮಾಜದಲ್ಲಿ ದುರಾಚಾರ, ಅನಾಚಾರಗಳು ಹೆಚ್ಚಾಗುತ್ತವೆ ಎಂದು ಹೇಳಿದರು.

ನಮ್ಮ ಮನಸ್ಸು ಯಾವಾಗ ಶುದ್ಧವಿರುತ್ತದೋ ಅದರ ಪ್ರತಿಬಿಂಬವನ್ನು ಮನೆಯ ಸ್ವಚ್ಛತೆಯಲ್ಲಿ ಕಾಣಬಹುದು. ಅದರ ಪ್ರತಿಬಿಂಬ ಸಮಾಜದಲ್ಲಿ ಕಾಣುತ್ತದೆ. ಹಾಗಾಗಿ ಮಹಿಳೆಯ ಜವಾಬ್ದಾರಿ ಬಹಳ ದೊಡ್ಟದು. ಹಿಂದೆ ಅವಿಭಕ್ತ ಕುಟುಂಬವಿತ್ತು. ಸಮಸ್ಯೆಗಳು ಉದ್ಭವಿಸಿದಾಗ ಮನೆಯಲ್ಲಿಯೇ ಪರಿಹರಿಸಿಕೊಳ್ಳುವ ಚೌಕಟ್ಟಿತ್ತು. ಆದರೆ ಈಗ ಅಪರಿಚಿತರ ಬಳಿ ಸಾಮಾಜಿಕ ಮಾಧ್ಯಮಗಳ ಮೂಲಕ ಸಮಸ್ಯೆ ಹೇಳಿಕೊಳ್ಳುತ್ತಿದ್ದೇವೆ. ಯಾರೋ ದೂರದಲ್ಲಿರುವವರು ಅದಕ್ಕೆ ಪರಿಹಾರ ಸೂಚಿಸುವಂತಾಗಿದೆ. ಮನೆಯಲ್ಲಿಯೇ ಪರಸ್ಪರ ನಂಬಿಕೆಯಿಲ್ಲದೆ ಅನ್ಯರನ್ನು ನಂಬುವ ಪರಿಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದರು. ಪಾಶ್ಚಿಮಾತ್ಯರ ಪ್ರಭಾವದಿಂದ ನಾವಿಂದು ಸ್ವಚ್ಛಂದ ಜೀವನಕ್ಕೆ ಮಾರುಹೋಗಿದ್ದೇವೆ. ಹಿಂದೆ ಮನೆಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಮಹಿಳೆಯರು ಅಲಂಕಾರ, ಸಿಂಗಾರ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವುಗಳನ್ನು ಬಿಟ್ಟು ಬದುಕುವುದನ್ನೇ ಶೋಭೆ, ಭೂಷಣ ಎಂದು ಕೊಳ್ಳುತ್ತಿದ್ದೇವೆ. ಮಕ್ಕಳು ವಿದೇಶದಲ್ಲಿ ವಾಸವಿದ್ದರೆ, ಇಲ್ಲಿ ಪೋಷಕರು ಅನಾಥ ಪ್ರಜ್ಞೆಯಿಂದ ಜೀವಿಸುವಂತಾಗಿದೆ. ಮಕ್ಕಳು, ಮೊಮ್ಮಕ್ಕಳು ನಮ್ಮೊಂದಿಗಿದ್ದು ಅವರು ನಮ್ಮ ನೋವು ನಲಿವುಗಳಲ್ಲಿ ಭಾಗಿಯಾದರೆ ನೆಮ್ಮದಿಯಿರುತ್ತದೆ. ಮಕ್ಕಳು ದೂರದಲ್ಲಿದ್ದು ಕೇವಲ ಹಣವಿದ್ದರೆ ಏನು ಪ್ರಯೋಜನ. ಕಡೆಗೆ ಪೋಷಕರ ಅಂತ್ಯಸಂಸ್ಕಾರ ಮಾಡಲೂ ಮಕ್ಕಳು ಬರುವುದೇ ಇಲ್ಲ. ಇದು ನಮ್ಮ ಸಮಾಜವಿಂದು ಯಾವ ಕಡೆ ಸಾಗುತ್ತಿದೆ ಎಂಬುದನ್ನು ತೋರಿಸುತ್ತಿದ್ದು, ಪ್ರತಿಯೊಬ್ಬರೂ ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.ಮಹಿಳಾ ಸಮಾಜದ ಗೌರವ ಕಾರ್ಯದರ್ಶಿ ಸುಭಾಷಿಣಿ ಆರ್.ಕುಮಾರ್ ಮಾತನಾಡಿದರು. ಶೈಲಜ ವೆಂಕಟೇಶ್, ಮಹಿಳಾ ಸಮಾಜದ ಗೌರವಾಧ್ಯಕ್ಷೆ ಟಿ.ಎಸ್.ಶೀಲವತಿ, ಶುಭ ರಮೇಶ್, ಉಷಾ ಅನಂತರಾಮಯ್ಯ ಇದ್ದರು.