ಸಾರಾಂಶ
ಹಾವೇರಿ: ಮನುಷ್ಯ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧನೆ ಮಾಡುವುದು ಸಹಜ. ಆದರೆ ತಾನು ಬೆಳೆದು ತನ್ನೊಂದಿಗೆ ಇತರರನ್ನು ಬೆಳೆಸಿ, ಸಮಾಜದ ಋಣ ತೀರಿಸಲು ಮಾಡುವ ನಿಸ್ವಾರ್ಥ ಸೇವೆಯು ನಿಜವಾದ ಸಾಧನೆ. ಅಂಥಹ ಸಾಧಕರನ್ನು ಗುರುತಿಸುವುದು ಸಹ ಸಮಾಜದ ಕರ್ತವ್ಯ ಎಂದು ನಗರದ ಖ್ಯಾತ ಉದ್ಯಮಿ ಅಜಿತ ಮಾಗಾವಿ ಹೇಳಿದರು.ನಗರದ ರೋಟರಿ ಸಂಸ್ಥೆಯು ಹಮ್ಮಿಕೊಂಡಿದ್ದ ನವೀಕೃತ ರೋಟರಿ ಸಭಾಂಗಣ ಉದ್ಘಾಟನೆ ಮತ್ತು ನೇಶನ್ ಬಿಲ್ಡರ್ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೋಟರಿ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದೆ. ಇತರರಿಗೆ ಸೇವೆ ಒದಗಿಸುವುದು, ಸಮಗ್ರತೆಯನ್ನು ಉತ್ತೇಜಿಸುವುದು, ಸಮಾಜದ ಸಹಭಾಗಿತ್ವದಿಂದ ವಿಶ್ವಶಾಂತಿ ಮತ್ತು ಸದ್ಭಾವನೆಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು.ಪ್ರತಿವರ್ಷ ನಮ್ಮ ಸಂಸ್ಥೆಯಿಂದ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವ ಮಹನೀಯರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸಿ, ಗೌರವಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ. ಈ ವರ್ಷ ಜಲ್ಲೆಯ ಉತ್ತಮ ಶಿಕ್ಷಕರನ್ನು ಗುರುತಿಸಿ ನೇಶನ್ ಬಿಲ್ಡರ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನೇಶನ್ ಬಿಲ್ಡರ್ ಪ್ರಶಸ್ತಿಗೆ ಭಾಜನರಾದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆ ಶಿಕ್ಷಕ ವಿನಯಕುಮಾರ ಬನ್ನಿಹಳ್ಳಿ ಇವರಿಗೆ ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ರಾಜು ಲಿಗಾಡೆ, ಯಶ್ ಮಲ್ಲನಗೌಡ್ರ, ಡಾ. ರವಿ ಹಿಂಚಿಗೇರಿ, ಡಾ. ಎಲ್.ಎಸ್. ಬಾಲೇಹೊಸೂರ, ಸುಮಿತ್ ಜೈನ್, ದಿವಾಕರ್ ಕುಲಕರ್ಣಿ, ವನಿತಾ ಮಾಗನೂರ, ಬಸವರಾಜ ಮಾಸೂರ ಇದ್ದರು. ಎನ್. ವಜ್ರಕುಮಾರ ಕಾರ್ಯಕ್ರಮ ನಿರ್ವಹಿಸಿದರು.