ಗಂಗಾವತಿ ನಗರದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಕ್ರಿಯಾಶೀಲ ಲೇಖಕಿಯರ ಸಂಘದಿಂದ ದೀಪೋತ್ಸವ- ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ದೀಪಾವಳಿ ಮಹಿಳಾ ಕವಿಗೋಷ್ಠಿ ನಡೆಯಿತು.

ಗಂಗಾವತಿ: ಕನ್ನಡದ ನೆಲ, ಜಲ, ಭಾಷೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜಮಾತೆ ಹಾಗೂ ಕರಕುಶಲ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.

ನಗರದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಕ್ರಿಯಾಶೀಲ ಲೇಖಕಿಯರ ಸಂಘದಿಂದ ದೀಪೋತ್ಸವ- ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ದೀಪಾವಳಿ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಈ ರೀತಿಯ ಸಾಹಿತ್ಯಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನ್ನಪೂರ್ಣಾ ಸಿಂಗ್ ಮಾತನಾಡಿ, ಕಾರ್ಯಕ್ರಮದ ಜತೆಗೆ ನಮ್ಮ ಆಚಾರ, ವಿಚಾರ ಪರಂಪರೆ ಮರೆಯದೆ, ನಿರಂತರ ಉಳಿಸುವ ಪ್ರಯತ್ನ ಮಾಡಬೇಕು ಎಂದರು. ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಮಾಜ ಚಿಂತಕಿ ಎಚ್.ಎಂ. ಶೈಲಜಾ ಮಾತನಾಡಿ, ಕಾವ್ಯವನ್ನು ಕಟ್ಟುವ ಬಗೆಯನ್ನು ಅರ್ಥಪೂರ್ಣವಾಗಿ ತಿಳಿಸಿದರು. ಒಂದು ಕಾವ್ಯಕ್ಕೆ ತನ್ನದೇ ಆದ ಸ್ವಂತಿಕೆ, ಜವಾಬ್ದಾರಿ ಇರುತ್ತದೆ. ಆ ನಿಟ್ಟಿನಲ್ಲಿ ನಾವು ವೈಚಾರಿಕತೆ, ಸಾಮಾಜಿಕ ಕಳಕಳಿ ಇರುವ ಕಾವ್ಯ ರಚಿಸಬೇಕು ಮತ್ತು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವಂತಹ ಕವಿತೆಗಳನ್ನು ರಚಿಸಬೇಕು ಎಂದರು.

ಬಸವಣ್ಣ, ಅಕ್ಕಮಹಾದೇವಿ, ಶಿಶುನಾಳ ಶರೀಫ, ಕಬೀರ ಅವರ ಆದಿಯಾಗಿ ಕುವೆಂಪು, ಬೇಂದ್ರೆ, ಲಂಕೇಶ್ ಇಂತಹ ಮಹಾನ್ ಸಾಹಿತಿಗಳ, ಸಂತರ ಪುಸ್ತಕಗಳನ್ನು ಹೆಚ್ಚು ಓದಿದರೆ ನಮಗೆ ಸಾಹಿತ್ಯ ಜ್ಞಾನದ ಜತೆಗೆ, ಶಬ್ದಗಳ ಜೋಡಣೆ, ಪದಗಳ ಅರ್ಥ ತಿಳಿದು, ಕಾವ್ಯ ರಚಿಸಲು ಸಹಾಯಕವಾಗುತ್ತವೆ. ಹಾಗಾಗಿ ಕಾವ್ಯ ರಚಿಸುವ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮ ಸಂಚಾಲಕರಾದ ಸಿ. ಮಹಾಲಕ್ಷ್ಮೀ ಮಾತನಾಡಿ, ಮಹಿಳೆಯರಿಗೆ, ಯುವತಿಯರಿಗೆ, ಕವಿತೆ ರಚಿಸುವ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಏರ್ಪಡಿಸಿ, ಸಾಹಿತ್ಯಾಸಕ್ತಿ ಬೆಳೆಸಲು ಪ್ರೆರೇಪಿಸುತ್ತೇವೆ. ಜತೆಗೆ ಮೂಲ ಜನಪದ ಕಲೆಗಳನ್ನು, ಆಟಗಳನ್ನು ಆಡಿಸುವ ಮೂಲಕ ಹಳ್ಳಿ ಸೊಗಡಿನ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು. ಜಿ. ಉಮಾದೇವಿ, ವಿಜಯಲಕ್ಷ್ಮಿ ಸೂಗೂರು ಉಪಸ್ಥಿತರಿದ್ದರು.

ಮಾಲಾ ಶ್ರೀಧರ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಕೃಷ್ಣಪ್ಪ ನಿರ್ವಹಿಸಿದರು. ಜಗದೇವಿ ಕಲಶೆಟ್ಟಿ ಸ್ವಾಗತಿಸಿದರು. ವಾಣಿಶ್ರೀ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾರದಾ ಪಾಟೀಲ್, ಸುಪ್ರಿಯಾ ಜಾಜಿ, ಸುವರ್ಣಾ, ಚಂದ್ರಕಲಾ, ಕವಿತಾ ಅಸುಂಡಿ, ಸಂಧ್ಯಾ, ನೀಲಮ್ಮ ಹಿರೇಮಠ, ತಾರಾ ಸಂತೋಷ, ಲಕ್ಷ್ಮೀ, ಸನ್ನಿಧಿ, ಗೀತಾ, ಮೇಘಾ, ಸೌಭಾಗ್ಯಾ, ಶಕುಂತಲಾ ಕಲ್ಲೂರು, ಭುವನೇಶ್ವರಿ ಸಾರಂಗಮಠ, ಶರಣಮ್ಮ ಅಂಗಡಿ, ವಿಜಯಲಕ್ಷ್ಮಿ ಸಿದ್ದಾಪುರ, ಕವಿತಾ ನಾಯ್ಡು, ಕವಿತಾ ಏ.ಕೆ. ಹಾಗೂ 40ಕ್ಕೂ ಹೆಚ್ಚು ಕವಯಿತ್ರಿಯರು ಭಾಗವಹಿಸಿ ಕವನ ವಾಚಿಸಿದರು.