ಸಂವಿಧಾನದ ಆಶಯ ಎತ್ತಿ ಹಿಡಿಯುವುದು ಕರ್ತವ್ಯ: ಡಿಸಿ ವಿದ್ಯಾಕುಮಾರಿ

| Published : Feb 12 2024, 01:31 AM IST

ಸಂವಿಧಾನದ ಆಶಯ ಎತ್ತಿ ಹಿಡಿಯುವುದು ಕರ್ತವ್ಯ: ಡಿಸಿ ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಪೆಯ ಕಡಲ ತೀರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ತಿರಂಗ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಭಾರತದ ಪ್ರತಿಯೊಬ್ಬ ಪ್ರಜೆಯೂ ಘನತೆ ಗೌರವದಿಂದ ಬದುಕಲು ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಇದರ ಆಶಯಗಳನ್ನು ಎತ್ತಿ ಹಿಡಿಯುವುದು ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಹೇಳಿದರು.

ಅವರು ಶನಿವಾರ ಸಂಜೆ ಮಲ್ಪೆಯ ಕಡಲ ತೀರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ತಿರಂಗ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಭ್ರಾತೃತ್ವ ಸೇರಿದಂತೆ ಮತ್ತಿತರ ಹಕ್ಕು ಒದಗಿಸಿದೆ. ಸಂವಿಧಾನದ ತತ್ವಾದರ್ಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನ ಕುರಿತ ಅರಿವು ಹೊಂದಬೇಕು ಎಂದರು.

ಬಳಿಕ ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಭೋದಿಸಿದರು.

ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಸಂವಿಧಾನ ನಮ್ಮ ಜನರ ಉಸಿರಾಗಿದೆ. ಇದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಸಮುದ್ರತೀರದಲ್ಲಿ ಮರಳಿನ ಮೇಲೆ ರಚಿಸಲಾಗಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆಯ ಚಿತ್ರಗಳು ಜನರನ್ನು ಆಕರ್ಷಿಸಿದವು. ಯಕ್ಷಗಾನ ವೇಷಭೂಷಣದ ಸೆಲ್ಫಿ ಪಾಯಿಂಟ್‌ನಲ್ಲಿ ಜನರು ವಿಶೇಷ ಆಸಕ್ತಿಯಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.ಈ ಸಂದರ್ಭ ಬನ್ನಂಜೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ಸುಚಿತ್ರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಕುರಿತ ಸುಂದರ ನೃತ್ಯವನ್ನು ಪ್ರಸ್ತುತಗೊಂಡಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅನಿತಾ ಮಡ್ಲೂರು, ದಲಿತ ಮುಖಂಡರಾದ ರಮೇಶ್ ಕೋಟ್ಯಾನ್, ಮಂಗಳೂರು ಆರನೇ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ್ ಹಾಗೂ ಮತದಾರರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.