ಸಾರಾಂಶ
ಆಧುನಿಕ ಕಾಲದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವ ಮಾತು ಈಗ ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಸಾಹಿತಿ ಪ್ರೊ. ಕೃಷ್ಣೇಗೌಡ ಹೇಳಿದರು.
ಲಕ್ಷ್ಮೇಶ್ವರ: ಆಧುನಿಕ ಕಾಲದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವ ಮಾತು ಈಗ ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಸಾಹಿತಿ ಪ್ರೊ. ಕೃಷ್ಣೇಗೌಡ ಹೇಳಿದರು.
ಬುಧವಾರ ಸಮೀಪದ ಶಿಗ್ಲಿಯ ನವಚೇತನ ವಿದ್ಯಾನಿಕೇತನ ಸಂಸ್ಥೆಯ ನುಡಿ ಚೇತನ-24ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಾಲಕರು ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಿದರೆ ಸಾಕು ಅವರು ಆಧುನಿಕ ಜಗತ್ತಿನ ನಿರ್ಮಾಣ ಮಾಡುವ ಶಕ್ತಿವಂತ ಪ್ರಜೆಗಳಾಗುತ್ತಾರೆ. ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತದ ವಿದ್ಯಾವಂತ ಯುವಕರು ಪ್ರಮುಖ ಹುದ್ದೆಗಳಲ್ಲಿ ಕಾಣ ಸಿಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದಕ್ಕಾಗಿ ನೀವು ಎಷ್ಟೇ ಆಸ್ತಿ ಅಂತಸ್ತು ಗಳಿಸದೆ ಹೋದರೂ ಚಿಂತಿಸಬೇಕಿಲ್ಲ ನಿಮ್ಮ ಮಗುವನ್ನು ವಿದ್ಯಾವಂತರನ್ನಾಗಿ ಮಾಡಿದಲ್ಲಿ ಅವರು ತಮ್ಮನ್ನು ಹಾಗೂ ನಮ್ಮ ಜಗತ್ತನ್ನು ಸೃಷ್ಟಿಸುವ ನಾಯಕರಾಗುತ್ತಾರೆ. ಉತ್ತರ ಕರ್ನಾಟಕದ ಮಣ್ಣಿನ ಗುಣವು ವಿಶೇಷವಾಗಿದ್ದು, ಇಲ್ಲಿನ ಮಕ್ಕಳು ಹಾಗೂ ಯುವಕರು ನಾಡಿನ ಶಕ್ತಿಯಾಗಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ವೈದ್ಯ ಡಾ.ಎನ್.ಕೆ. ಕಾಳಪ್ಪನವರ ಮಾತನಾಡಿ, ನಿಮ್ಮ ಮಕ್ಕಳಿಗೆ ಹೆಚ್ಚು ಅಂಕಗಳಿಸಬೇಕು ಎನ್ನುವ ಒತ್ತಡ ಹಾಕುವ ಕಾರ್ಯವನ್ನು ಪಾಲಕರು ಮಾಡಬಾರದು. ನಮ್ಮ ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿವಂತರಾಗಿದ್ದಾರೆ ಎನ್ನುವದನ್ನು ತಿಳಿದುಕೊಂಡು ಅತ್ತ ಮಕ್ಕಳಿಗೆ ಪ್ರೋತ್ಸಾಹ ನೀಡಿದಲ್ಲಿ ಆ ರಂಗದಲ್ಲಿ ನಿಮ್ಮ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ.ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಮಕ್ಕಳನ್ನು ಸರಿಯಾಗಿ ರೂಪಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಕೇವಲ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸಾಲದು, ಅವರನ್ನು ಯೋಗ್ಯ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಹೇಳಿದರು. ಸಮಾರಂಭದ ಸಾನಿಧ್ಯವನ್ನು ಹಾವೇರಿಯ ಅಗಡಿ ವನದ ಗುರುಲಿಂಗ ಸ್ವಾಮಿಗಳು ಮಾತನಾಡಿ, ಶಿಗ್ಲಿಯ ಮಣ್ಣಿನಲ್ಲಿ ದೇಶವನ್ನು ಆಳುವ ಉತ್ತಮ ಪ್ರಜೆಗಳನ್ನು ರೂಪಿಸುವ ತಾಕತ್ತು ಹೊಂದಿದೆ. ಕನ್ನಡ ಭಾಷೆ ಹಾಗೂ ಮಗುವಿನ ಶಿಕ್ಷಣ ಮತ್ತು ಪಾಲಕರ ಜವಾಬ್ದಾರಿಯ ಕುರಿತು ಪ್ರೊ. ಕೃಷ್ಣೇಗೌಡರು ಉತ್ತಮವಾದ ಮಾತುಗಳನ್ನು ಹೇಳಿದ್ದಾರೆ ಎಂದರು. ಸಂಸ್ಥೆಯ ಅಶೋಕ ಶಿರಹಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಗದಗ ಲೋಕಾಯುಕ್ತ ಸಿಪಿಐ ರವಿ ಪುರುಷೋತ್ತಮ ಅವರಿಗೆ ನವಚೇತನ-24 ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ನಾರಾಯಣಪ್ಪ ಹರವಿ, ಸುಭಾಷ ಹುಲಗೂರ, ಡಾ.ಪಿ.ಡಿ.ತೋಟದ, ಸೂಗೀರಪ್ಪ ಬೆಳವಿಗಿ, ಬಾಲಚಂದ್ರ ಜನಿವಾರದ, ಬಸವರಾಜ ಹಂಜಿ, ಸುರೇಶ ಭಂಡಾರಿ, ಆನಂದ ಕಮತಗಿ ಹಾಗೂ ಶಿಕ್ಷಕರು ಇದ್ದರು.ಸಂಜೆ ನಡೆದ ಜಾನಪದ ವೈವಿಧ್ಯತೆಗಳಾದ ಡೊಳ್ಳು ಕುಣಿತ, ಕೋಲಾಟ, ಬೀಸು ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಜೋಕುಮಾರನ ಪದ, ಸೋಬಾನೆ ಹಾಡು, ದೊಡ್ಡಾಟದ ಹಾಡುಗಳು. ಲಂಭಾಣಿ ಭಜನೆ ಜಾನಪದ ರೂಪಕಗಳು ನೋಡಗರನ್ನು ಸೆಳೆಯುವಲ್ಲಿ ಯಶಸ್ವಿಯಾದವು.