ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾಟಕ ಕಲೆ ಕ್ಷೀಣಿಸುತ್ತಿರುವ ಕಾರಣ ನಾಟಕಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು ಜೊತೆಗೆ ಮುಂದುವರಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಎರಡು ದಿನಗಳ ಕಾಲದ ಜೆಎಸ್‌ಎಸ್ ರಂಗೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಪುಸ್ತಕ ಕೊಂಡು ಓದಿದಷ್ಟು ಸಂತೋಷ ಮತ್ತು ಏಕ್ರಾಗತೆ ಹೆಚ್ಚುತ್ತೆ. ಜೆಎಸ್‌ಎಸ್ ಸಂಸ್ಥೆ ೧೯೪೮ ರಲ್ಲಿ ಜೆಎಸ್‌ಎಸ್ ಕಲಾಮಂಟಪ ಸ್ಥಾಪಿಸಿ ನಾಟಕ ಕಲೆ ಉಳಿಸಿ ಬೆಳಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಕಲೆ ಮನುಷ್ಯನ ಅವಿಬಾಜ್ಯ ಭಾಗ. ಮನುಷ್ಯ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಆನಂದಿಸುವ ಪ್ರವೃತ್ತಿ ರೂಢಿಸಿಕೊಂಡಾಗ ಜಂಜಾಟದಿಂದ ಹೊರ ಬರಲು ಸಾಧ್ಯ ಎಂದರು.ಸಂಗೀತ, ನೃತ್ಯ, ನಾಟಕ ಮತ್ತು ಜನಪದ ಕಡೆ ಆಸಕ್ತಿ ವಹಿಸಿದರೆ ಕಲಾವಿದರಾಗಲು ಸಾಧ್ಯ. ಮಹದೇಶ್ವರ, ಮಂಟೇಸ್ವಾಮಿ ಕಥಾ ಪ್ರಸಂಗ ಕೇಳುವವರು ಇದ್ದರೆ ಇಡೀ ದಿನರಾತ್ರಿ ಹಾಡುತ್ತಾರೆ. ದಕ್ಷಯಜ್ಞ ನಾಟಕ ನೋಡಲು ಕಾಯಂ ಜನರೂ ಇದ್ದಾರೆ ಎಂದರು. ಮಾಸ್ಟರ್ ಹಿರಣಯ್ಯ ಅವರ ನಾಟಕದಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯದ ಮೂಲಕ ಜನರಿಗೆ ತಿಳಿಸುತ್ತಿದ್ದರು. ನೋವಿಗೆ ಸ್ಪಂದಿಸುವ ಶಕ್ತಿ ಕಲೆಗೆ ಇದೆ. ಸತ್ಯಹರಿಶ್ಚಂದ್ರ ನಾಟಕದಲ್ಲಿ ನಕ್ಷತ್ರಿಕ ಪಾತ್ರ ಮಾಡಿದ ವ್ಯಕ್ತಿಯನ್ನು ಬೈಯುತ್ತಿದ್ದರು ಆ ರೀತಿ ನಾಟಕದಲ್ಲಿ ಬರುವ ಪಾತ್ರಗಳು ಜನರ ಮನಸ್ಸಿನಲ್ಲಿ ನಾಟುತ್ತದೆ ಎಂದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕಲೆಯಿಂದ ಜ್ಞಾನ ವಿಕಸನವಾಗುತ್ತದೆ. ಪ್ರತಿಭೆಯಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದರೆ ಸಾಧಕರಾಗಲು ಸಾಧ್ಯವಾಗುತ್ತದೆ. ಮೊಬೈಲ್‌ನಿಂದ ನಾಟಕಗಳು ಪ್ರಸ್ತುತ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿವೆ. ಸಾವಿರಾರು ಜನರು ಸೇರುವ ಜಾತ್ರೆಯಲ್ಲಿ ನಾಟಕ ಇತ್ತು. ಇಂದು ಆ ಸಂಭ್ರಮ ಇಲ್ಲ ಎಂದರು.ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ಆಸ್ಟೆಕ್ ಪ್ರಿಸಿಷನ್ ಎಂಜಿನಿಯರಿಂಗ್ ಕಂಪನಿ ನಿರ್ದೇಶಕ ಮಹದೇವಪ್ರಸಾದ್ ಚೌಡಹಳ್ಳಿ ಮಾತನಾಡಿ, ಶಂಭು ಹಕ್ಕಿ ಅವರ ‘ವಚನಾಮೃತ’ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಶಿಕ್ಷಣ ನೀಡುವುದರ ಜೊತೆಗೆ ಕಲಾಮಂಟಪದ ಮೂಲಕ ಜನರಿಗೆ ಆಧ್ಯಾತ್ಮಿಕ ಜೀವನ ಸಂದೇಶ ತಲುಪಿಸುತ್ತಿದೆ ಎಂದರು.
ಗಾಂಧೀಜಿಗೆ ಸತ್ಯಹರಿಶ್ಚಂದ್ರ ನಾಟಕದಿಂದ ಪ್ರೇರಣೆಯಾಗಿ ಕಳ್ಳತನ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿ ಅವರು ಪರಿವರ್ತನೆಯಾಗಿ ರಾಷ್ಟ್ರಪಿತರಾದರು. ಸಂಗೀತ ಮನಸ್ಸನ್ನು ನಿಯಂತ್ರಿಸಿ ಆಧ್ಯಾತ್ಮಿಕತೆ ಕಡೆ ಭಕ್ತಿ ಪರವಶರಾಗಿ ಮಾಡುತ್ತದೆ ಎಂದರು. ಸಮಾರೋಪದಲ್ಲಿ ಜೆಎಸ್ಎಸ್ ರಂಗೋತ್ಸವ ಸಂಚಾಲಕ ಚಂದ್ರಶೇಖರಾಚಾರ್ ಹೆಗ್ಗೊಠಾರ ಜೆಎಸ್‌ಎಸ್ ರಂಗೋತ್ಸವ-೨೦೨೪ ರ ವರದಿ ಮಂಡಿಸಿದರು. ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ, ಪ್ರಾಂಶುಪಾಲೆ ಡಾ.ಮಹದೇವಮ್ಮ ಪಿ,ಸಹಾಯಕ ಪ್ರಾಧ್ಯಾಪಕ ಸಿದ್ದಮಲ್ಲಿಕಾರ್ಜುನಸ್ವಾಮಿ ಎಚ್.ಎಸ್.ಸಾಂಸ್ಕೃತಿಕ ವೇದಿಕೆಗಳ ಸಂಚಾಲಕ ಡಾ.ಪಂಕಜ ಎಚ್.ಪಿ ಹಾಗೂ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರ ವರ್ಗ, ವಿದ್ಯಾರ್ಥಿಗಳು, ಗುಂಡ್ಲುಪೇಟೆ ಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರು ಇದ್ದರು. ಜೆಎಸ್‌ಎಸ್ ಸಂಸ್ಥೆಯಿಂದ ಸಾಂಸ್ಕೃತಿಕ ಕ್ರಾಂತಿ ಜೆಎಸ್‌ಎಸ್ ಕಲಾಮಂಟಪ ಇಡೀ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಾಂಸ್ಕೃತಿಕ ಕ್ರಾಂತಿ ಮಾಡುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.ಜೆಎಸ್‌ಎಸ್ ಸಂಸ್ಥೆ ಭಾರತೀಯ ಪರಂಪರೆಯನ್ನು ಜಗತ್ತಿಗೆ ವಿಸ್ತರಿಸುತ್ತಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುತ್ತಿಲ್ಲ. ಶಿಕ್ಷಣ ನಮ್ಮೆಲ್ಲರನ್ನು ಸಮಾಜದಲ್ಲಿ ಮನುಷ್ಯರನ್ನಾಗಿ ಮಾಡುತ್ತದೆ. ಶಿಕ್ಷಣದಿಂದ ಸೃಜನಶೀಲ ಪರಂಪರೆ, ಅಂತಃಕರಣ ಮನುಷ್ಯರನ್ನಾಗಿ ಮಾಡಬೇಕು ಎಂದು ಸಿದ್ದಯ್ಯ ಪುರಾಣಿಕ ಅವರ ‘ಮೊದಲು ನೀ ಮಾನವನಾಗು’ ಎಂಬ ಮಾತನ್ನು ಪ್ರಸ್ತಾಪಿಸಿದರು.
ತಿಂಗಳಲ್ಲಿ ೫ ರಿಂದ ೬ ನಾಟಕವನ್ನು ನೋಡುತ್ತಾ ಹೋದರೆ ಹಾಗೂ ಸಂಗೀತ ಕೇಳುತ್ತ ಹೋದರೆ ನಮ್ಮಲ್ಲಿ ಆಗುವ ಬದಲಾವಣೆ ಗೊತ್ತಾಗುತ್ತದೆ. ನಮ್ಮ ಚಿಂತನೆಗಳು ಮನಸ್ಸನ್ನು ಯಾವಾಗಲು ಸಮಾಧಾನ ಮತ್ತು ಸಂತೋಷವಾಗಿರಿಸುತ್ತೆ ಎಂದರು. ನಮ್ಮ ದೇಶ ಯಾಕೆ ಸುಭಿಕ್ಷವಾಗಿದೆ ಅಂದರೆ ಎಲ್ಲ ಧರ್ಮ,ಸಂಸ್ಕೃತಿಯನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣ ಜೊತೆಗೆ ಪ್ರೀತಿಯಿಂದ ಬದುಕುವ ಸಾಂಸ್ಕೃತಿಕ ಪರಂಪರೆ ನಮ್ಮ ಮಣ್ಣಲ್ಲಿದೆ ಎಂದರು.ಶಾಸಕ ಗಣೇಶ್‌ಗೆ ಪೇಟ ತೊಡಿಸಿದ
ಮಾಜಿ ಶಾಸಕ ನಿರಂಜನ್ಕುಮಾರ್ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ರಾಜಕೀಯ ಬದ್ಧ ವೈರಿಗಳು. ಒಂದಲ್ಲ ಒಂದು ವಿಷಯಕ್ಕೆ ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯವಾಡುತ್ತಿದ್ದ ಹಾಲಿ, ಮಾಜಿ ಶಾಸಕರು ರಂಗೋತ್ಸವ ವೇದಿಕೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರಿಗೆ ಮೈಸೂರು ಪೇಟಾ ತೊಡಿಸುವ ಮೂಲಕ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾರ್ಯಕರ್ತರಲ್ಲಿ ಆಶ್ಚರ್ಯ, ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕ, ಮಾಜಿ ಶಾಸಕರ ವಿಷಯಕ್ಕೆ ಕೆಲ ಕಟ್ಟಾ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಈಗ ಇವರಿಬ್ಬರು (ಹಾಲಿ, ಮಾಜಿ ಶಾಸಕರು) ಪೇಟಾ ಹಾಕೋದು ನೋಡಿ ನಮಗ್ಯಾಕೆ ರಾಜಕೀಯ ಎಂದು ಗೊಣಗುತ್ತಿದ್ದಾರೆ. ಕೆಲವರು ನಾವ್ಯಾಕೆ ಕಚ್ಚಾಡದೋದು ಅವರೇ ಚೆನ್ನಾಗಿದ್ದಾರೆ? ನಾವುಗಳು ಕಾಂಗ್ರೆಸ್, ಬಿಜೆಪಿ ಅಂತ ಕಿತ್ತಾಡ್ತೀವಿ ಇದೆಲ್ಲ ಬೇಕಾ ಎಂಬ ಪ್ರಶ್ನೆಗಳು ಕೇಳಿ ಬಂದಿವೆ. ಸುತ್ತೂರುಶ್ರೀಗಳಿದ್ದ ಕಾರ್ಯಕ್ರಮದಲ್ಲಿ ಹಾಲಿ, ಮಾಜಿ ಶಾಸಕರ ಸಮಾಗಮವಾಗಿದೆ. ಶ್ರೀಗಳು ಇದ್ದಾರೆಂದು ಪೇಟಾ ಹಾಕಿರಬಹುದು ಆದರೆ ಯಾವತ್ತಿದ್ರೂ ರಾಜಕೀಯ ಬದ್ಧ ವೈರಿಗಳೇ ಎಂದು ಕೆಲ ಬೆಂಬಲಿಗರು ಹೇಳಿದ್ದಾರೆ.