ಸಾರಾಂಶ
ಜಿಲ್ಲಾ ಮಟ್ಟದ ಭಜನಾ ಮೇಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ ತಿಪಟೂರು
ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಗ್ರಾಪಂ ಸದಸ್ಯ ವಿ.ಎಂ. ಪರಮೇಶ್ವರಪ್ಪ ತಿಳಿಸಿದರು.ತಾಲೂಕಿನ ಬಾಗುವಾಳ ಗ್ರಾಮದ ಶ್ರೀ ಆಲದಮರ ಮುನಿಯಪ್ಪ ಸ್ವಾಮಿ ದೇವಾಲಯ ಆವರಣದಲ್ಲಿ ಕಲ್ಪಕುಸುಮ ಕಲಾ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಸೇವಾಪದ ಸ್ವೀಕಾರ ಸಮಾರಂಭ, ಜಿಲ್ಲಾ ಮಟ್ಟದ ಭಜನಾ ಮೇಳ ಉದ್ಘಾಟಿಸಿ ಮಾತನಾಡಿದರು. ಯುವಕರನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಭಜನೆ ಸಹಕಾರಿಯಾಗಿದೆ. ಆದರೆ ಇಂದು ದೂರದರ್ಶನ, ಸಿನಿಮಾ, ಧಾರವಾಹಿ, ಆರ್ಕೆಸ್ಟ್ರಾಗಳಿಂದ ಭಜನಾ ಕಲೆ ನಶಿಸಿಹೋಗುತ್ತಿದೆ ಎಂದರು.ನಿವೃತ್ತ ಶಿಕ್ಷಕ ಮಡೆನೂರು ಸೋಮಶೇಖರ್ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಕಲ್ಯಾಣ ಕ್ರಾಂತಿ ನಡೆಯಿತು. ಯುವ ಪೀಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.ಸಾರ್ಥವಳ್ಳಿ ಹುಚ್ಚಮ್ಮದೇವಿ ದೇವಾಲಯದ ಧರ್ಮದರ್ಶಿ ರಾಜಶೇಖರಪ್ಪ ಮಾತನಾಡಿ, ಕಲ್ಪತರು ನಾಡಿನಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಯಾವಾಗಲೂ ನಿರಂತರವಾಗಿ ಸಹಕಾರ ದೊರಕುತ್ತಿದೆ ಎಂದರು.ಸಪ್ತಗಿರಿ ಆಸ್ಪತ್ರೆ, ಜ್ಯೋತಿ ನೇತ್ರಾಲಯ, ಅಣ್ಣಯ್ಯನ ಹನುಮಾನ್ ಸೇವಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಸಂಘದ ಕಾರ್ಯದರ್ಶಿ ಸಾರ್ಥವಳ್ಳಿ ಶಿವಕುಮಾರ್, ತಿಮ್ಲಾಪುರ ಸ್ವಾಮಿ, ಅಣ್ಣಯ್ಯ, ಮೃತ್ಯುಂಜಯ, ಡಾ. ತೇಜಸ್ವಿನಿ, ಡಾ. ಅನುಷಾ ಭಾಗವಹಿಸಿದ್ದರು.