ಸಾರಾಂಶ
ಜೋಡಿ ಹೋಚಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಎಂ.ಆರ್.ಪ್ರಕಾಶ್ ಉದ್ಘಾಟಿಸಿದರು.
ನುಡಿ ನಿತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಂ.ಆರ್. ಪ್ರಕಾಶ್ ಅಭಿಮತಕನ್ನಡಪ್ರಭ ವಾರ್ತೆ ಕಡೂರು
ಕರ್ನಾಟಕ ಎಂದರೆ ಬರಿ ನಾಡಲ್ಲ, ಅದು ಕನ್ನಡಿಗರ ಉಸಿರು ಅದನ್ನು ಕಾಪಾಡುವ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರದ್ದು ಎಂದು ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಸಮೀಪದ ಜೋಡಿ ಹೋಚಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಎಂದರೆ ಭಾಷೆಯಲ್ಲ, ಅದು ಭಾವನೆ. ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ತಾಯಿ ಮತ್ತು ತಾಯಿ ನಾಡನ್ನು ಎಂದಿಗೂ ಮರೆಯಬಾರದು ಎಂದರು.
ಪ್ರಾಸ್ತಾವಿಕವಾಗಿ ಜೋಡಿಹೋಚಿಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ, ಸಿರಿಗನ್ನಡ ವೇದಿಕೆ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಇದೀಗ ನಮ್ಮ ಶಾಲೆಯಲ್ಲಿ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.ಜಿಲ್ಲಾ ಜಾಗತಿಕ ಲಿಂಗಾಯತ ವೇದಿಕೆಯ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಮಹಿಳೆ ಸಾಕಷ್ಟು ಪ್ರಭಾವ ಬೀರಿದ್ದಾಳೆ. ತನ್ನ ದೈನಂದಿನ ಜೀವನ ಹಾಗೂ ತನ್ನ ಜೀವನದ ಮುಖ್ಯ ಮಜಲುಗಳನ್ನು ಮಹಿಳೆ ಎಳೆ ಎಳೆಯಾಗಿ ಆಸ್ವಾದಿಸುತ್ತ ಅದಕ್ಕೊಂದು ಸಾಹಿತ್ಯ ರೂಪ ಕೊಟ್ಟಿದ್ದಾಳೆ ಎಂದು ಹೇಳಿದರು.
ತಾಲೂಕು ಸಿರಿಗನ್ನಡದ ಅಧ್ಯಕ್ಷ ಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲೇನಹಳ್ಳಿ ನಾಗರಾಜು, ಪಂಚನಹಳ್ಳಿ ಲೊಕೇಶ್ ಅವರ ಯುಗಳ ಗೀತಾಗಾಯನ ಮುದನೀಡಿತು. ಶಾಲೆಯ ಶಿಕ್ಷಕ ಮತ್ತು ಮಕ್ಕಳು ಭಾಗವಹಿಸಿದ್ದರು.