ಮಕ್ಕಳನ್ನು ಹೊಣೆಗಾರಿಕೆಯಿಂದ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು

| Published : Jul 19 2024, 12:51 AM IST

ಮಕ್ಕಳನ್ನು ಹೊಣೆಗಾರಿಕೆಯಿಂದ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಭದ್ರಾ ಪದವಿ ಕಾಲೇಜು, ಭದ್ರಾ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದ್ದು, ಇಂದಿನ ಯುವಕರನ್ನು ನೈತಿಕ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿಯೊಡನೆ ಹೊಣೆಗಾರಿಕೆಯಿಂದ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಆಡಳಿತವಿದ್ದು, ನಾವೆಲ್ಲರೂ ಕಾನೂನು ಪಾಲಿಸುವಲ್ಲಿ ಬದ್ಧರಾಗಿರಬೇಕು. ಸಂವಿಧಾನದ ಆಶಯಗಳಂತೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕೆಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಹೇಳಿದರು.

ನಗರದ ಕುವೆಂಪು ಕನ್ನಡಭವನದಲ್ಲಿ ನಡೆದ ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯದ ಸಮಾನತೆ ಚಳವಳಿ ಆರಂಭಿಸಿದ್ದರು. ಮಹಿಳೆಯರಿಗೆ ಮತ್ತು ಶೋಷಿತರಿಗೆ ಸಮಾನ ಅವಕಾಶ ನೀಡಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾನತೆ ಸಮಾಜದ ಕನಸನ್ನು ನನಸು ಮಾಡಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸಿ ಮಾನವತೆ ಸಮಾಜದ ಕನಸನ್ನು ಬಸವಣ್ಣನವರು ಕಂಡಿದ್ದರು. 1948ರಲ್ಲಿ ಜಾರಿಗೆ ಬಂದ ಮಾನವ ಹಕ್ಕುಗಳು ಪ್ರಪಂಚದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಸಹಕಾರಿಯಾಗಿದ್ದು, ಮಾನವ ಹಕ್ಕುಗಳು ಜಾರಿಗೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಾಂಗೀಯ ಹೋರಾಟ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆ ಅಂತಹ ಕ್ರೌರ್ಯ ನಿಷೇಧಿಸಿ, ಜನಾಂಗಗಳ ಏಳಿಗೆಗೆ ನೆರವು ಮತ್ತು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ಮಾತನಾಡಿ, ಆಧುನಿಕ ಯುವಕರಿಗೆ ಸರಳ ಜೀವನ ಅವಶ್ಯಕವಿದ್ದು, ದೈನಂದಿನ ಜೀವನದ ಕರ್ತವ್ಯ ಅರಿತು ಬಾಳಬೇಕಾಗಿದೆ. ಶಿಕ್ಷಣ ಬದುಕನ್ನ ಹಸನ ಮಾಡುವಂತಿರಬೇಕು. ಇಂದಿನ ಸಮಾಜಕ್ಕೆ ಸಂವಿದಾನದ ಜ್ಞಾನ ಬೇಕಾಗಿದ್ದು, ಅದರ ಮಹತ್ವ ಎಲ್ಲರು ಅರಿಯಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಚಾರಿತ್ರ್ಯ ತುಂಬಾ ಅವಶ್ಯಕವೆಂದರು.

ದಾವಣಗೆರೆ ವಿವಿ, ಕರ್ನಾಟಕ ರಾಜ್ಯ ವಿವಿ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆ ಅತ್ಯಾವಶ್ಯಕವೆಂದು ಹೇಳುವುದರ ಮೂಲಕ ಬರೀ ಹಕ್ಕುಗಳಿಗೆ ಮಾತ್ರ ಮಹತ್ವ ಕೊಡದೆ, ಕರ್ತವ್ಯಗಳಿಗೂ ಮಹತ್ವ ನೀಡಬೇಕು. ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವದ ಅಡಿಯಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರೊ.ಟಿ ಮುರುಗೇಶ್ ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಪ್ರೊ.ಟಿ.ಮುರುಗೇಶ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರಮಾಣೀಕೃತ ಪದವಿ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭದ್ರಾ ಎಜುಕೇಷನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಸಂಕೇತ್, ಭದ್ರಾ ಪಪೂ ಕಾಲೇಜು ಪ್ರಾಚಾರ್ಯ ಡಿ.ಚಂದ್ರಪ್ಪ, ಉಪನ್ಯಾಸಕರಾದ ಎಂ.ಕೆ.ಪೂರ್ಣೀಮ, ಎಂ.ವಿ.ಸುಮ, ಸಿ.ಕೊಟ್ರೇಶ ಇತರರು ಇದ್ದರು. ವಿದ್ಯಾರ್ಥಿ ಕೆ.ಎನ್.ಪ್ರಜ್ವಲ್ ನಿರೂಪಿಸಿದರೆ ಸಂಜಯ್ ಕುಮಾರ್ ಸ್ವಾಗತಿಸಿದರು. ಉಸ್ಮಾ ಫಾಲಕ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ರಂಜಿತಾ ವಂದಿಸಿದರು.