ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಗುರುವನ್ನು ಮೀರಿ ಒಳ್ಳೆಯತನದಲ್ಲಿ ಶಿಷ್ಯ ಬೆಳೆದು, ನಾಲ್ಕಾರು ಜನರ ಬಾಯಲ್ಲಿ ಒಳ್ಳೆಯವನೆಂದು ಕರೆಯಿಸಿಕೊಂಡರೆ, ಗುರುವಿಗೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಸಿದ್ದಗಂಗಾ ಮಠದ ಉದ್ಯಾನೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಗುರು-ಶಿಷ್ಯರ ಮಹಾಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಗುರುವಂದನಾ ಕಾರ್ಯಕ್ರಮ ಗುರುಗಳು ಮತ್ತು ಶಿಷ್ಯರು ಇಬ್ಬರು ಅಪರಿಮಿತ ಹೆಮ್ಮೆ ಪಡುವಂತಹ ಕಾರ್ಯಕ್ರಮವಾಗಿದೆ. ನನ್ನಿಂದ ಕಲಿತ ಶಿಷ್ಯ ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂದು ಗುರುವು ಸಂತೋಷ ಪಟ್ಟರೆ, ಗುರುವು ನೀಡಿದ ಶಿಕ್ಷಣದಿಂದ ನಾನು ಇಂದು ಈ ಮಟ್ಟಕ್ಕೆ ಬೆಳೆದೆ ಎಂಬ ಧನ್ಯತಾ ಭಾವ ಶಿಷ್ಯನಲ್ಲಿ ಮೂಡುತ್ತಿದೆ. ಹಾಗಾಗಿಯೇ ಇದೊಂದು ವರ್ಣಿಸಲಾಗದ ಸಂತೋಷದ ಸಮಾಗಮ ಎಂದು ಸ್ವಾಮೀಜಿ ಬಣ್ಣಿಸಿದರು.ಶ್ರೀಮಠದ ವಿದ್ಯಾರ್ಥಿಗಳು ಎಂಬುದೇ ಒಂದು ದೊಡ್ಡ ಗುರುತು. ಹಾಗಾಗಿ ಇಂದು ಸುಮಾರು ೩೦ ವರ್ಷಗಳ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದೀರಿ. ಬಹಳ ಸಂತೋಷದ ವಿಚಾರ. ಆದರೆ ಇದಕ್ಕಿಂತ ಸಂತೋಷದ ವಿಚಾರ ಎಂದರೆ ಇಂದು ಸೇರಿರುವ ನೀವೆಲ್ಲರೂ ಜನವರಿ 21 ರ ದಾಸೋಹ ದಿನದಂದು, ಏಪ್ರಿಲ್ 1 ರ ಗುರುವಂದನೆಯ ದಿನ ಹಾಗೂ ಶಿವರಾತ್ರಿ ಜಾತ್ರೆಯ ಸಂದರ್ಭದಲ್ಲಿ ಹಾಜರಿದ್ದರೆ, ಇದಕ್ಕಿಂತ ಹೆಚ್ಚಿನ ಸಂತೋಷವಾಗುತ್ತದೆ ಎಂದರು. ಕೋಟ್..ಗುರು ಎಂದರೆ ಯಾರು ಎನ್ನುವ ಪ್ರಶ್ನೆ ಬಂದರೆ, ಜನ್ಮ ಕೊಟ್ಟ ತಾಯಿ ಮೊದಲ ಗುರು, ನಿಮ್ಮ ಬೆಳವಣಿಗೆಗೆ ಸಹಕರಿಸಿದ ತಂದೆ ಎರಡನೇ ಗುರು, ಭೂಮಿ ತಾಯಿ ಮೂರನೇ ಗುರು, ನಾಲ್ಕು ಅಕ್ಷರ ಕಲಿಸಿದ ಶಿಕ್ಷಕರು ನಾಲ್ಕನೇ ಗುರುವಾದರೆ, ನಿಮ್ಮೆಲ್ಲರಿಗೂ ಐದನೇ ಗುರು ಎಂದರೆ ಅದು ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಗುರುವಂದನಾ ನುಡಿಗಳನ್ನಾಡಿದ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೋ.ರಂ.ಬಸವರಾಜು, ಗುರುಪೂರ್ಣೀಮೆ ಎನ್ನುವುದು ಶಿವ ಪೂರ್ಣಿಮೆಯಾಗಿ ಶ್ರೀಮಠದಲ್ಲಿ ಬೆಳಗಬೇಕು. ಗುರುಶಿಷ್ಯರ ಸಂಬಂಧ, ತಾಯಿ ಮಗುವಿನ ಸಂಬಂಧ. ಎಲ್ಲಿದ್ದರೂ ಸೆಳೆತ ಇದ್ದೇ ಇರುತ್ತದೆ.ಒಂದು ಅಕ್ಷರ ಕಲಿಸಿದರೂ ಆತ ಗುರುವೇ ಆಗಿರುತ್ತಾನೆ. ಆತನ ಸ್ಮರಣೆಯಿಂದ ಒಳ್ಳೆಯದೇ ಆಗುತ್ತದೆ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್, ಅಧ್ಯಾತ್ಮಿಕ ಗುರುಪರಂಪರೆ ಮತ್ತು ಲೌಕಿಕ ಗುರುಪರಂಪರೆ ಬಗ್ಗೆ ಮಾತನಾಡಿ, ಅಧ್ಯಾತ್ಮದಲ್ಲಿ ಗುರು,ಶಿಷ್ಯ ಸಂಬಂಧ ಇಂದಿಗೂ ಮುಂದುವರೆದುಕೊಂಡು ಬಂದಿದೆ.ಅದೇ ರೀತಿ ಲೌಕಿಕ ಪರಂಪರೆಯಲ್ಲಿಯೂ ಕುವೆಂಪು-ಟಿ.ಎಸ್.ವೆಂಕಣ್ಣಯ್ಯ,ದಾ.ಸು.ಶಾಮರಾಯ ಮತ್ತು ಜಿ.ಎಸ್.ಶಿವರುದ್ರಪ್ಪ ಹೀಗೆ ಅನೇಕ ಉದಾಹರಣೆಗಳಿವೆ.ಇಂದಿಗೂ ಲಕ್ಷಾಂತರು ಗುರುಗಳು ಶ್ರೀಶಿವಕುಮಾರಸ್ವಾಮಿಗಳನ್ನು ಗುರುಗಳಾಗಿ ಸ್ವೀಕರಿಸುವುದನ್ನು ಕೂಡ ನಾವು ನೋಡಬಹುದು ಎಂದರು.ವೇದಿಕೆಯಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರಸ್ವಾಮಿಜಿ, ನಿವೃತ್ತ ಉಪನ್ಯಾಸಕ ಶಿವಕುಮಾರ್ ಬಳಿಗಾರ್, ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು, ಅವರ ಕುಟುಂಬದವರು ಉಪಸ್ಥಿತರಿದ್ದರು. ಇದೇ ವೇಳೆ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಬೋಧನೆ ಮಾಡಿ ನಿವೃತ್ತರಾದ 150 ಹಾಗೂ ಹಾಲಿ ಬೋಧನೆಯಲ್ಲಿ ತೊಡಗಿರುವ 100 ಜನ ಶಿಕ್ಷಕರಿಗೆ ಗುರುವಂದನೆ ನಡೆಯಿತು.