ಸಾರಾಂಶ
ಭಾರತ ದೇಶದ ನಕ್ಷೆ ವಿಶಾಲವಾಗಿ, ವಿಸ್ತಾರವಾಗಿ ಬದಲಾಗುವ ಸಮಯ ಬಂದಿದೆ
ಕನ್ನಡಪ್ರಭ ವಾರ್ತೆ ಕಾಗವಾಡ
ಭಾರತ ದೇಶದ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಉಗ್ರರಿಗೆ ನಮ್ಮ ದೇಶದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭವ್ಯ ಭಾರತ ದೇಶದ ನಕ್ಷೆ ಈ ಹಿಂದೆ ವಿಶಾಲವಾಗಿತ್ತು. ಈಗ ಉಗ್ರರ ನೆಲೆಗಳನ್ನು ಹಿಮ್ಮೆಟ್ಟಿಸುವ ಮೂಲಕ ಮತ್ತೆ ಭಾರತ ದೇಶದ ನಕ್ಷೆ ವಿಶಾಲವಾಗಿ, ವಿಸ್ತಾರವಾಗಿ ಬದಲಾಗುವ ಸಮಯ ಬಂದಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಮುನಿ ಮಹಾರಾಜರು ಹೇಳಿದರು.ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಶನಿವಾರ ಉಗ್ರರ ವಿರುದ್ಧ ಸಿಂದೂರ ಕಾರ್ಯಾಚರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ವೀರ ಸಿಂಧೂರ ಲಕ್ಷ್ಮಣ ಎಂಬ ಕ್ರಾಂತಿಕಾರಿ ವ್ಯಕ್ತಿ ಆಗಿ ಹೋಗಿದ್ದಾರೆ. ವೀರ ಸಿಂಧೂರ ಲಕ್ಷ್ಮಣ ಎಂದಿಗೂ ಅನ್ಯಾಯ ಸಹಿಸಿಕೊಂಡಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡಿ ಅನೇಕ ಹೆಣ್ಣು ಮಕ್ಕಳ ಸಿಂದೂರ ಉಳಿಸಿದ್ದಾರೆ. ಅವರ ಹಾಗೆಯೇ ನಮ್ಮ ಸೈನಿಕರು ನಿರಂತರ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಬದುಕು, ಬದುಕಲು ಬಿಡು ಎಂಬ ಅಹಿಂಸೆಯ ತತ್ವದ ಮೇಲೆ ಗೌರವ ಇಟ್ಟಿರುವ ನಮ್ಮ ದೇಶವು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಅನ್ಯಾಯ ಮಾಡಲು ಬಂದವರನ್ನು ಸುಮ್ಮನೆ ಬಿಟ್ಟಿದ್ದು ಇತಿಹಾಸದಲ್ಲಿ ಇಲ್ಲ. ಅಧುನಿಕ ಯುದ್ಧ ಸಲಕರಣೆ ಬಳಸಿಕೊಂಡು ಕೇಂದ್ರ ಸರ್ಕಾರ ಉಗ್ರರನ್ನು ಸದೆ ಬಡಿಯಲು ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಶಾಂತಿಯುತ ಭಾರತ ದೇಶದ ಮೇಲೆ ಎರಗಿ ಬರುವ ಉಗ್ರ ಸಂಘಟನೆಗಳಿಗೆ ಈಗಿನ ಯುದ್ಧ ಪಾಠವಾಗಲಿದೆ. ನಮ್ಮ ದೇಶ ಸಾಧು ಸಂತರ, ಋಷಿ ಮುನಿಗಳ ಜನ್ಮ ನೀಡಿದ ಪುಣ್ಯ ಭೂಮಿಯಾಗಿದೆ. ಪುಣ್ಯದ ಸಂಪಾದನೆ ಈ ದೇಶದಲ್ಲಿದೆ. ಮಹಾತ್ಮರ ಆಶೀರ್ವಾದ ಎಲ್ಲ ಯೋಧರ ಹಾಗೂ ಪ್ರಜೆಗಳ ಮೇಲೆ ನಿರಂತರವಾಗಿ ಇರಲಿದೆ. ಸೈನಿಕರ ಬೆನ್ನಿಗೆ ಕೇಂದ್ರ ಸರ್ಕಾರ ನಿಂತಿದೆ. ದೇಶದ ಬುದ್ಧಿವಂತ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಅನ್ಯಾಯಕ್ಕೆ ಉಳಿಗಾಲವಿಲ್ಲವೆಂದು ಅವರು ಹೇಳಿದರು.ಈ ಸಂಧರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಅರುಣಕುಮಾರ ಯಲಗುದ್ರಿ, ಅಶೋಕ ಮುಗ್ಗನವರ, ವಿವೇಕಾನಂದ ಯಲಗುದ್ರಿ, ಬಸಗೊಂಡ ಮುಗ್ಗನವರ ಇತರರು ಇದ್ದರು.