ನಾಡಿನ ಪ್ರಸಿದ್ಧ ಮೈಸೂರು ದಸರಾದಲ್ಲಿ 1936ರಿಂದ ನಡೆದುಕೊಂಡು ಬಂದ ಚಲನಚಿತ್ರೋತ್ಸವವನ್ನು ಈ ಬಾರಿ ದುಡ್ಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಕೈಬಿಟ್ಟಿರುವುದು ದುರಂತದ ಸಂಗತಿ ಎಂದು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಿನ ಪ್ರಸಿದ್ಧ ಮೈಸೂರು ದಸರಾದಲ್ಲಿ 1936ರಿಂದ ನಡೆದುಕೊಂಡು ಬಂದ ಚಲನಚಿತ್ರೋತ್ಸವವನ್ನು ಈ ಬಾರಿ ದುಡ್ಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಕೈಬಿಟ್ಟಿರುವುದು ದುರಂತದ ಸಂಗತಿ ಎಂದು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಬುಧವಾರ ನಾಡಹಬ್ಬ ಶಿವಮೊಗ್ಗ ದಸರಾ ಅಂಗವಾಗಿ ಆಯೋಜಿಸಿದ್ದ ಚಲನಚಿತ್ರ ದಸರಾ ಉದ್ಘಾಟಿಸಿ ಮಾತನಾಡಿ, ಲಕ್ಷಾಂತರ ಕಲಾವಿದರು ಮತ್ತು ತಂತ್ರಜ್ಞರಿಗೆ ಉದ್ಯೋಗ ನೀಡಿದ ಚಿತ್ರರಂಗವನ್ನು ಕಡೆಗಣಿಸಬೇಡಿ. ಸಿನಿಮಾ ಒಂದು ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ವಿದೇಶದಲ್ಲಿ ಕಾಮ್ಸ್ ಫೆಸ್ಟಿವಲ್ ಮುನ್ನ ಹಲವು ದೇಶಗಳ ತಂತ್ರಜ್ಞರು 6 ತಿಂಗಳ ಮುನ್ನವೇ ತಯಾರಿ ನಡೆಸುತ್ತಾರೆ. ಆ ಮೂಲಕ ಚಿತ್ರರಂಗವನ್ನು ಬೆಳೆಸಿ ಸಮಾಜಕ್ಕೆ ಸಂದೇಶ, ಕೊಡುಗೆ ನೀಡಿದ್ದಾರೆ. ನಾನು ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಕಳೆದ 14 ವರ್ಷಗಳಿಂದ ಫೈಲ್ ಹಿಡಿದು ರಾಜಕಾರಣಿಗಳ ಬಳಿಗೆ ಓಡಾಡುತ್ತಿದ್ದೇನೆ. ಹಿಂದೆ 36 ಗಂಟೆಗಳ ಸಿನಿಮಾ ಮಾಡುತ್ತಿದ್ದರು. ಆದರೂ ಜನ ಇನ್ನೆರಡು ಗೀತೆ ಇರಬೇಕೆಂದು ಹೇಳುತ್ತಿದ್ದರು. ಈಗ 90 ನಿಮಿಷಕ್ಕೆ ಸೀಮಿತವಾಗಿದೆ ಎಂದರು.

ಶಿವಮೊಗ್ಗದಲ್ಲಿ ದಸರಾ ನಡೆಸುತ್ತಿದ್ದಾರೆ. ಇಲ್ಲಿ ಕಲೆ ಮತ್ತು ಕಲಾದೇವಿಯೇ ನೆಲೆಸಿದ್ದಾಳೆ. ಎಲ್ಲಾ ಜನಪ್ರತಿನಿಧಿಗಳು ತಮ್ಮ ಸಹಾಯಹಸ್ತ ಚಾಚಿದ್ದಾರೆ. ಇಲ್ಲಿಯೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವ ತಯಾರಿಯೂ ನಡೆಯುತ್ತಿದೆ. ಅದರೊಂದಿಗೆ ಮಕ್ಕಳ ಚಲನಚಿತ್ರೋತ್ಸ ಕೂಡ ನಡೆಸಬೇಕು ಎಂದು ವಿನಂತಿ ಮಾಡಿದ್ದೇನೆ ಎಂದರು.

ಅನಂತನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದ್ದು ಸಂತೋಷ ತಂದಿದೆ. ಇದಕ್ಕೂ ಮೊದಲು ವಿಷ್ಣು ವರ್ಧನ್, ಬಿ. ಸರೋಜದೇವಿ ಸೇರಿದಂತೆ ಅನೇಕ ಅಗ್ರಜ ಕಲಾವಿದರಿಗೆ ಪ್ರಶಸ್ತಿ ಕೈತಪ್ಪಿ ಹೋಗಿತ್ತು ಎಂದರು.

ಕಿರುತೆರೆ ನಟಿ ಸಂಗೀತ ಅನಿಲ್ ಕೂಡ ಶಿವಮೊಗ್ಗ ಚಲನಚಿತ್ರ ದಸರಾವನ್ನು ಕೊಂಡಾಡಿದರು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್ ಮಾಲ್ಗುಡಿ ಡೇಸ್‌ನ ತಮ್ಮ ಶಿವಮೊಗ್ಗದ ಚಿತ್ರೀಕರಣದ ಅನುಭವ ಹಂಚಿಕೊಂಡರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮಾರ್ನಾಮಿಬೈಲ್‌ನಲ್ಲಿ ಪ್ರಾರಂಭವಾದ ಒಂದು ದಿನದ ದಸರಾ ಈಗ 11 ದಿನದ ವೈಭವದ ದಸರಾ ಆಗಿ ಹೊರಹೊಮ್ಮಿದೆ. ಸಾವಿರಾರು ಕಲಾವಿದರು ವಿವಿಧ ಚಟುವಟಿಕೆಗಳ ಮೂಲಕ ಭಾಗವಹಿಸಿದ್ದಾರೆ. ಸುಮಾರು 250ಕ್ಕೂ ಹೆಚ್ಚು ನಗರದ ಎಲ್ಲಾ ದೇವತೆಗಳು ಮತ್ತು ಮೂರು ಆನೆಗಳೊಂದಿಗೆ ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ ವಿಜಯದಶಮಿಯಂದು ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು.

ವಿಪ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಕನ್ನಡ ಚಿತ್ರಗಳು ಉಳಿಯಬೇಕಾಗಿದೆ. ಇಂದಿನ ಸಿನಿಮಾಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊಂದು ಚಿತ್ರಗಳು ಬರುತ್ತವೆ. ಈ ವರ್ಷ ‘ಪ್ರೇಮದ ಊರಲಿ’ ಚಿತ್ರವು ಯಾವ ದೊಡ್ಡ ಬಜೆಟ್ ಇಲ್ಲದೇ ಹಿಟ್ ಆಗಿರುವುದು ಸಂತೋಷದ ವಿಷಯ. ಅರಸಾಳಿನಲ್ಲಿ ಮಾಲ್ಗುಡಿ ಡೇಸ್ ನೆನಪಿನಲ್ಲಿ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸಚಿವರು ಒಪ್ಪಿದ್ದಾರೆ ಎಂದರು.

ಪೃಥ್ವಿಗೌಡ ನಿರ್ದೇಶನದ ಕಬಂಧ, ಪ್ರಶಾಂತ್ ಸಾಗರ್ ನಿರ್ದೇಶನದ ಶರಾವತಿ, ಮೇದಿನಿ ಕೆಳಮನೆ ನಿರ್ದೇಶನದ ದಾಳಿ, ಈಶಾನ್ಯ ಶರ್ಮಾ ನಿರ್ದೇಶನದ ಡಬಲ್ ಟಿಕ್, ನಾಗರಾಜ್ ಕಿತ್ತೂರು ನಿರ್ದೇಶನದ ಖಾಲಿ ಕನಸಿನ ಕಾಗದ, ನವನ್ ಶ್ರೀನಿವಾಸ್ ನಿರ್ದೇಶನದ ಗೋಣಿಚೀಲ, ಅನಿಶ್ ಶರ್ಮಾ ನಿರ್ದೇಶನದ ವಡ್ಡಾರಾಧಕ, ನವೀನ್ ತೇಜಸ್ವಿ ನಿರ್ದೇಶನದ ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ, ವಿದ್ಯಾಲಕ್ಷ್ಮಿ ಪ್ರಲ್ಹಾದ್ ಅವರ ಘಮ, ಕಿರುಚಿತ್ರಗಳನ್ನು ಪ್ರದರ್ಶನ ಕಂಡವು.

ಹಾಗೆಯೇ ಕಲಾವಿದರಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಂ, ಶಿವಮೊಗ್ಗ ರಾಮಣ್ಣ, ರಘು ಗುಂಡ್ಲು, ಶಂಕರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸ್ಮನೆ, ನಟರಾದ ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್, ಹಿರಿತೆರೆ, ಕಿರುತೆರೆ ಕಲಾವಿದೆ ಸಂಗೀತಾ ಅನಿಲ್, ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ ರಾವ್ , ಪ್ರಭಾಕರ್, ವೈದ್ಯ, ಯಶವಂತ್ ಸೇರಿದಂತೆ ಹಲವರಿದ್ದರು.

ಪಾಲಿಕೆ ಅಧಿಕಾರಿ ನಾಗೇಂದ್ರ ಸ್ವಾಗತಿಸಿ, ವಿನಯ್ ಶಿವಮೊಗ್ಗ ಅತಿಥಿಗಳ ಪರಿಚಯಿಸಿದರು. ಚೈತ್ರಾ ನಿರಂತರ ನಿರೂಪಿಸಿದರು.