ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯ ಪರಿಷತ್‌ಗೆ ಹಿಂದಿನಿಂದಲೂ ಸಾಹಿತಿಗಳೇ ಆಧಾರಸ್ತಂಭವಾಗಿದ್ದಾರೆ. ಪರಿಷತ್‌ನ್ನು ನಡೆಸಿಕೊಂಡು ಬರುವಲ್ಲಿ ಸಾಹಿತಿಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಹಾಗಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳಲ್ಲದವರು ಸಮ್ಮೇಳನಾಧ್ಯಕ್ಷರಾಗುವುದು ಅಕ್ಷಮ್ಯ, ಅದು ಔಚಿತ್ಯವೂ ಅಲ್ಲ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಪುಸ್ತಕ ಆಯ್ಕೆ ಸಮಿತಿ ಡಾ.ಎಚ್.ಎಸ್. ಮುದ್ದೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ‘ವಾರದ ಅತಿಥಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಾಗಲು ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳಲ್ಲದವರು ದುಂಬಾಲು ಬಿದ್ದಿರುವುದು ಸರಿಯಲ್ಲ. ಇದಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಏನೆಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಸೂಕ್ತ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು, ಮಠಾಧೀಶರು, ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲು ಚಿಂತಿಸುತ್ತಿರುವುದಾಗಿ ಹೇಳಿರುವುದಕ್ಕೆ ಈಗಾಗಲೇ ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಈ ಬಗ್ಗೆ ರಾಜ್ಯಾಧ್ಯಕ್ಷರು ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ೧೯೧೫ರಲ್ಲಿ ಆರಂಭವಾದಾಗಿನಿಂದ ಸಾಹಿತಿಗಳಿಂದಲೇ ನಡೆಯುತ್ತಿದೆ. ಅಂದಿನಿಂದಲೂ ಸಾಹಿತಿಗಳೇ ಪರಿಷತ್ತನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಸ್ಥಳದ ವಿಷಯದಲ್ಲಿ ವಿವಾದ ಬೇಡ:ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಮ್ಮೇಳನವನ್ನು ಬಹಳ ವಿಶಿಷ್ಟವಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಕಾರ್ಯಕ್ರಮಗಳು ಒಂದೇ ಸ್ಥಳದಲ್ಲಿ ನಡೆಯಬೇಕೆಂಬುದು ಎಲ್ಲರ ಅಭಿಲಾಷೆ. ಇದಕ್ಕಾಗಿ ೧೦೦ ಎಕರೆ ಜಾಗದ ಅವಶ್ಯಕತೆ ಇದೆ. ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಗುರುತಿಸಿರುವ ಸ್ಥಳ ಸೂಕ್ತವಾಗಿದೆ. ಒಂದೇ ಸ್ಥಳದಲ್ಲಿ ೧೦೦ ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ, ವಿಚಾರಗೋಷ್ಠಿ, ವೇದಿಕೆ ಕಾರ್ಯಕ್ರಮಗಳು ನಡೆಯುವುದರಿಂದ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ತಮಗೆ ಇಷ್ಟಬಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಎಂದರು.
ಜನರನ್ನು ಕರೆಸುವುದು ಸೂಕ್ತವಲ್ಲ:ಸಮ್ಮೇಳನಕ್ಕೆ ಸಾಹಿತಿಗಳು, ಆಸಕ್ತರು ಬರುವುದು ಸೂಕ್ತ. ಅದನ್ನು ಬಿಟ್ಟು ಹಳ್ಳಿ ಹಳ್ಳಿಗಳಿಗೆ ಬಸ್ ಕಳುಹಿಸಿ ಜನರನ್ನು ಕರೆಸುವುದು ಸಮಂಜಸವಲ್ಲ. ಹೊರ ಜಿಲ್ಲೆಗಳಿಂದ ಬರುವ ಸಾಹಿತ್ಯಾಸಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಪ್ರಕಾಶ್, ಉಪಾಧ್ಯಕ್ಷ ಕೆ.ಎನ್. ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ರಾಜ್ಯ ಸಮಿತಿ ಕಾರ್ಯದರ್ಶಿ ಮತ್ತಿಕೆರೆ ಜಯರಾಂ ಹಾಜರಿದ್ದರು.ಪ್ರತಿ ಸಮಿತಿ ಸಭೆಯಲ್ಲೂ ಅಧ್ಯಕ್ಷರ ಟಾರ್ಗೆಟ್..!
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಬ್ಬರಲ್ಲಾ ಒಬ್ಬರು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರನ್ನು ಟಾರ್ಗೆಟ್ ಮಾಡಿ, ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರನಡೆಯುತ್ತಿದ್ದಾರೆ. ಇದು ಸರಿಯಲ್ಲ. ಸಲಹೆಗಳನ್ನು ಕೊಟ್ಟು ಸೌಹಾರ್ದತೆಯಿಂದ ವರ್ತಿಸಬೇಕು. ನಾಲ್ಕು ಜನ ಇರುವ ಕುಟುಂಬದಲ್ಲೇ ಎಲ್ಲವೂ ಸರಿಯಿರುವುದಿಲ್ಲ. ಸಮನ್ವಯದಿಂದ ಮುನ್ನಡೆಯಬೇಕು ಎಂದು ಡಾ.ಎಚ್.ಎಸ್.ಮುದ್ದೇಗೌಡ ಸಲಹೆ ನೀಡಿದರು.ಸಮನ್ವಯ ಸಮಿತಿ ಸಭೆಗಳಲ್ಲಿ ತೆಗೆದುಕೊಳ್ಳುವ ತೀರ್ಮಾನ, ಸಲಹೆಗಳನ್ನು ಪರಿಗಣಿಸಲಾಗುತ್ತಿದೆ. ಎಲ್ಲ ವಿಷಯದಲ್ಲೂ ಅಸಹನೆ ಇದ್ದೇ ಇರುತ್ತದೆ. ಆದರೆ, ಆರೀತಿ ಮಾಡದೆ ಒಗ್ಗಟ್ಟಾಗಿ ಸಮ್ಮೇನವನ್ನು ಯಶಸ್ವಿ ಮಾಡಬೇಕು ಎಂದು ಹೇಳಿದರು.
ಪುಸ್ತಕ ಬರೆಯಲು ಸೋಮಾರಿತನ..!ಸಮ್ಮೇಳನದಲ್ಲಿ ೮೭ ಪುಸ್ತಕಗಳನ್ನು ಹೊರತರಲು ತೀರ್ಮಾನಿಸಿದ್ದು, ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ೩೮ ಪುಸ್ತಕಗಳನ್ನು ಹೊರತರಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇದುವರೆಗೂ ಕೇವಲ ೨೭ ಮಂದಿ ಪುಸ್ತಕಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ೫೦೦ಕ್ಕೂ ಹೆಚ್ಚು ಸಾಹಿತಿಗಳಿದ್ದು, ಪುಸ್ತಕ ಬರೆಯಲು ಬಹಳ ಸೋಮಾರಿಗಳಾಗಿದ್ದಾರೆ. ೧೭ ಪುಸ್ತಕಗಳು ಬೇಕಾಗಿದ್ದು, ಇನ್ನೂ ೧೫ ದಿನ ಕಾಲಾವಕಾಶ ನೀಡಲಾಗುವುದು. ಯುವ ಸಾಹಿತಿಗಳು ಜಿಲ್ಲೆಗೆ ಸಂಬಂಧಿಸಿದ ರಾಜಕೀಯ, ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳ ಬಗ್ಗೆ ೮೦ ರಿಂದ ೯೦ ಪುಟಗಳಲ್ಲಿ ಬರೆದು ತಮಗೆ ಕಳುಹಿಸಬೇಕು. ಉತ್ತಮ ಕೃತಿಗೆ ಆದ್ಯತೆ ನೀಡುವುದಾಗಿ ಡಾ. ಎಚ್.ಎಸ್. ಮುದ್ದೇಗೌಡ ತಿಳಿಸಿದರು.