ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡವನ್ನು ಶುಕ್ರವಾರ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಉಡುಪಿ ಕುತ್ಪಾಡಿಯ ಎಸ್‌ಡಿಎಂ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ । ಪೇಜಾವರ ಶ್ರೀಗಳ ಸಾನ್ನಿಧ್ಯ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡವನ್ನು ಶುಕ್ರವಾರ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ನಂತರ ಆಶೀರ್ವಚನ ನೀಡಿದ ಅವರು, ಇಂದು ನಾವೆಲ್ಲ ಆಧುನಿಕ ಚಿಕಿತ್ಸಾ ಪದ್ಧತಿಗೆ ಮೋಹಗೊಂಡು, ಹದಿನಾಲ್ಕು ವಿದ್ಯೆಗಳಲ್ಲಿ ಒಂದಾದ ಆಯುರ್ವೇದವನ್ನು ಮರೆಯುತ್ತಿದ್ದೇವೆ. ಆಯುರ್ವೇದ ಶಾಸ್ತ್ರದಲ್ಲಿ ಮಾಯವಾಗದ ರೋಗವೂ ಇಲ್ಲ ಮತ್ತು ಔಷಧವೂ ಇಲ್ಲ. ಇದನ್ನು ಸಮಾಜ ಅರಿಯದಿರುವುದು ನಮ್ಮ ದೌರ್ಭಾಗ್ಯ. ಮತ್ತೊಮ್ಮೆ ನಮ್ಮ ಪ್ರಾಚೀನತೆಯನ್ನು ನೆನಪಿಸಿಕೊಡುತ್ತಾ ಸಮಾಜವನ್ನು ಗುಣಮುಕ್ತವಾಗಿಸುವುದರಲ್ಲಿ ತೊಡಗಿರುವ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಅಭಿನಂದನಾರ್ಹವಾಗಿವೆ. ಆಯುರ್ವೇದದ ಮಹತ್ವವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಕಟ್ಟಿದ ಈ ಸಂಸ್ಥೆಗೆ ಶುಭವೇ ಆಗಲಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾಯಿತು. ಈಗ ರಾಮರಾಜ್ಯದ ಕನಸು ನನಸಾಗಬೇಕು. ಅಂದರೆ ಸಮಾಜದ ಎಲ್ಲರೂ ಸುಖಿಗಳಾಗಿರಬೇಕು. ಹಿಂದಿನ ಕಾಲದಲ್ಲಿ ಯೋಗಶಾಲೆ - ಆಸ್ಪತ್ರೆಗಳ ಅವಶ್ಯಕತೆಯಿರಲಿಲ್ಲ. ಏಕೆಂದರೆ ಎಲ್ಲರ ಆಹಾರ ಪದ್ಧತಿಯೇ ಹಾಗಿತ್ತು. ಆದರೆ ಇಂದಿನ ಕಾಲಕ್ಕನುಗುಣವಾಗಿ ಅಗತ್ಯವನ್ನು ಪೂರೈಸುವುದಕ್ಕೆ ಎಸ್ಡಿಎಂ ಸಂಸ್ಥೆಗಳಿಂದ ಸಾಧ್ಯವಾಗಿದೆ. ಇವತ್ತು ದೇಶದಲ್ಲಿ ಎಸ್‌ಡಿಎಂ ಎನ್ನುವ ಮೂರಕ್ಷರದ ಹೆಸರು ಎಲ್ಲೆಡೆ ಪಸರಿಸಿದೆ. ಇಂತಹ ಉಪಕಾರವನ್ನು ನಾಡಿಗೆ ಮಾಡುತ್ತ ಬಂದಿರುವ ಧರ್ಮಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕು ಎಂದು ಹೇಳಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ, ಈ ಮೊದಲು ಆಯುರ್ವೇದವನ್ನು ಶೈಕ್ಷಣಿಕವಾಗಿ ಸರಿಯಾಗಿ ಕಲಿಯುವ ಅವಕಾಶ ಇರಲಿಲ್ಲ. ಆದರೆ ಈಗ ಹಾಗಿಲ್ಲ, ಯಾರು ಬೇಕಾದರೂ ಆಯುರ್ವೇದವನ್ನು ಅಧ್ಯಯನ ಮಾಡುವ ಅವಕಾಶಗಳಿವೆ. ಕೊರೋನಾದ ಸಂದರ್ಭದಲ್ಲಿ ಆಯುರ್ವೇದ ಮಹತ್ತರ ಪಾತ್ರ ಹೊಂದಿತ್ತು ಮತ್ತು ಇಂದು ಜನರಿಗೆ ಈ ಕುರಿತು ಅರಿವು ಮೂಡಿದೆ. ನಮ್ಮಲ್ಲಿರುವ ಮೂರು ಆಯುರ್ವೇದದ ಕಾಲೇಜುಗಳು ಉತ್ತಮ ಹೆಸರನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.ಆಯುರ್ವೇದ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪ್ರಸಾದ್ ಬುದುರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಸುರೇಶ್‌ ಶೆಟ್ಟಿ, ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಸೇರಿದಂತೆ ಗಣ್ಯರು ಹಾಜರಿದ್ದರು.