ಸಾರಾಂಶ
ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿವುದು ಅತಿ ಮುಖ್ಯ: ನ್ಯಾ. ಸೋಮಚಿಕ್ಕಮಗಳೂರಿನ ಜೆವಿಎಸ್ ಕಾಲೇಜಿನಲ್ಲಿ ಕಾನೂನು ಅರಿವು
ಚಿಕ್ಕಮಗಳೂರಿನ ಜೆವಿಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಾವು ಜೀವಿಸಲು ಗಾಳಿ, ನೀರು, ಬೆಳಕು ಎಷ್ಟು ಅವಶ್ಯಕವೋ, ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿಯುವುದು ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಹೇಳಿದರು. ನಗರದ ಜೆವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ನಾವು ಜೀವಿಸಲು ಗಾಳಿ, ನೀರು, ಬೆಳಕು ಎಷ್ಟು ಅವಶ್ಯಕವೋ, ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿಯುವುದು ಅಷ್ಟೇ ಅವಶ್ಯಕ, ಎಲ್ಲಾ ಕ್ಷೇತ್ರಗಳು ಕಾನೂನಿನಡಿ ನಡೆಯುತ್ತದೆ, ಜೀವನ ನಡೆಸಲು ಬೇಕಾದಷ್ಟು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಮುಖ್ಯ ಎಂದರು. ಭವಿಷ್ಯದಲ್ಲಿ ಯುವ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ, ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ತಪ್ಪುಗಳು ನಡೆಯುವ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಇದರ ಉದ್ದೇಶ. ಕಾನೂನಿನ ಯೋಜನೆ ಅನುಷ್ಠಾನಕ್ಕೆ ಬರಲು ಇಲಾಖೆಗಳ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ ಎಂದು ಹೇಳಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಕಾನೂನು ರಚನೆ ಎಷ್ಟು ಮುಖ್ಯವೋ, ಅದರ ಅರಿವು ಮೂಡಿಸಿಕೊಳ್ಳುವುದು ಅಷ್ಟೇ ಮುಖ್ಯ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ಬಗ್ಗೆ ತಿಳಿಯಬೇಕು, ನಮ್ಮ ದೇಶದಲ್ಲಿ ಮನುಷ್ಯನ ಹುಟ್ಟಿನಿಂದ ಸಾವಿನ ವರೆಗೂ ಸಾವಿರಾರು ಕಾನೂನುಗಳಿವೆ, ಇಂತಹ ಕಾನೂನಿಂದ ಶಾಂತಿ ನೆಮ್ಮದಿಯಿಂದ ದೇಶದಲ್ಲಿ ಬದುಕುವ ಅವಕಾಶ ಮಾಡಿಕೊಡಲಾಗಿದೆ ಎಂದರು. ಶಾಲಾ ಸಲಹಾ ಸಮಿತಿ ಸದಸ್ಯ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕಾನೂನಿನ ಬಗ್ಗೆ ಮಾಹಿತಿ ನೀಡಲು ನ್ಯಾಯಾಧೀಶರು ಹಾಗೂ ವಕೀಲರು ಇರುತ್ತಾರೆ, ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ಕ್ಷಮೆ ಇರುವುದಿಲ್ಲ, ಆದ್ದರಿಂದ ದೇಶದ ಪ್ರತಿಯೋಬ್ಬ ನಾಗರಿಕರು ಕಾನೂನಿನ ಬಗ್ಗೆ ತಿಳಿಯುವುದು ಅಗತ್ಯ ಎಂದು ಹೇಳಿದರು. ಜೀವನದಲ್ಲಿ ತಮಗೆ ಅರಿವಿಲ್ಲದೆ ಮಾಡುವ ತಪ್ಪುಗಳು ಮುಂದೊಂದು ದಿನ ಶಿಕ್ಷಾರ್ಹ ಅಪರಾಧವಾಗುತ್ತದೆ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗೆ ತೆರಳುವಾಗ ಅವರ ಹಿನ್ನಲೆ ಪರಿಶೀಲಿಸಲಾಗುವುದು ಇಲ್ಲದೆ ಇದ್ದಲ್ಲಿ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ., ವಿದ್ಯಾರ್ಥಿಗಳು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಕಾನೂನು ಅಡಿಯಲ್ಲಿ ಕೆಲಸವನ್ನು ಮಾಡಬೇಕೆಂದು ತಿಳಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ, ಕಾನೂನು ಎಂದರೆ ಭಯಪಡುವ ವಿಷಯವಲ್ಲ, ಭಾರತ ದೇಶದ ಸಂವಿಧಾನ ವಿಶಾಲವಾಗಿದೆ ಮತ್ತು ತಪ್ಪು ಮಾಡದೆ ಅಪರಾಧಿಗಳು ಎಂದು ಗುರುತಿಸಿಕೊಂಡಾಗ ಕಾನೂನು ರೀತಿಯಲ್ಲಿ ಹೊರ ಬರಲು ಹಲವು ಅವಕಾಶಗಳು ಇವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಮೂಲಕ ನಮ್ಮ ಹಕ್ಕುಗಳನ್ನು ಆಯ್ಕೆ ಮಾಡಿ ಕೊಳ್ಳುವ ಅವಕಾಶವಿದೆ. ಇಂತಹ ಅವಕಾಶ ನೀಡಿದ ಅವರಿಗೆ ನಾವೆಲ್ಲರೂ ಋಣಿ ಎಂದರು. ಉಪಪ್ರ ಧಾನ ಕಾನೂನು ನೆರವು ಅಭಿರಕ್ಷಕ ಡಿ.ನಟರಾಜ್ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು, ಈ ಸಂದರ್ಭದಲ್ಲಿ ಸಿಇಒ ಕುಳ್ಳೇಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ತೇಜಸ್ವಿನಿ ಸ್ವಾಗತಿಸಿ, ಪವಿತ್ರ ನಿರೂಪಿಸಿ, ಸುಷ್ಮಿತಾ ವಂದಿಸಿದರು.23 ಕೆಸಿಕೆಎಂ 2ಚಿಕ್ಕಮಗಳೂರಿನ ಜೆವಿಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾ. ಸೋಮ ಉದ್ಘಾಟಿಸಿದರು. ಟಿ. ರಾಜಶೇಖರ್, ಎಂ.ಸಿ. ಪ್ರಕಾಶ್ ಇದ್ದರು.