ಕನ್ನಡಪ್ರಭ ವಾರ್ತೆ ರಾಮನಗರ
ರಾಮನಗರ ಕ್ಷೇತ್ರದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಕೆಲ ಪಟ್ಟಭದ್ರರು ಅರ್ಕಾವತಿ ರಿವರ್‌ಪ್ರೆಂಟ್ ಡೆವಲಪ್‌ಮೆಂಟ್ ಯೋಜನೆ ನೆಪದಲ್ಲಿ ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಪ್ರಚೋದನೆ ಮಾಡುತ್ತಿರುವುದು ಸರಿಯಲ್ಲ ಎಂದು ಹಿಂದುಳಿದ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಕಿಡಿಕಾರಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಟೌನಿನ ಮಧ್ಯಭಾಗದಲ್ಲಿ ಹರಿಯುತ್ತಿರುವ ಆರ್ಕಾವತಿ ನದಿಯ ಎರಡು ದಡದಲ್ಲಿ ಸುಮಾರು ₹157 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಲ್ಲಿ ಶ್ರೀ ಅರ್ಕೇಶ್ವರ ದೇವಾಲಯ, ಶನಿಮಹಾತ್ಮ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ರಾಘವೇಂದ್ರ ಕಾಲೋನಿ ಮನೆಗಳಿಗೆ ಧಕ್ಕೆ ಆಗಲಿದೆ ಎಂದು ಪ್ರಚೋದನೆ ಮಾಡಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರ ಹಿಂದೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಪರಿಶ್ರಮವಿದೆ. ನಗರಸಭೆ ಅಭಿವೃದ್ಧಿ ಪರವಾಗಿ ಇರಬೇಕೇ ಹೊರತು ವಿರುದ್ಧ ಅಲ್ಲ. ಅದರಲ್ಲೂ ವಿಪಕ್ಷದವರೇ ಯೋಜನೆ ಒಪ್ಪಿಕೊಂಡಿರುವಾಗ ಆಡಳಿತ ಪಕ್ಷದವರು ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಇನ್ನು ಮುಂದೆ ನಗರಸಭೆ ಅಭಿವೃದ್ಧಿ ಮರೆತು ಸರ್ಕಾರದ ವಿರುದ್ಧವಾಗಿ ನಡೆದುಕೊಂಡರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆರ್ಕಾವತಿ ಇಕ್ಕೆಲಗಳಲ್ಲಿ ಅದ್ಭುತವಾದ ಕಲ್ಪನೆಯೊಂದಿಗೆ ಸಾಕಾರಗೊಳ್ಳಲಿರುವ ಹೈಟೆಕ್ ಉದ್ಯಾನವನ ನಗರದ ಜನರ ಜೀವನಶೈಲಿಗೆ ಹೊಸ ರೂಪ ಕೊಡಲಿದೆ. ಸಾವಿರಾರು ಜನ ಬೀದಿ ಬದಿ ವ್ಯಾಪಾರಸ್ಥರು ಇನ್ನಿತರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜೀವನ ನಿರ್ವಹಣೆಗೆ ಸಹಕಾರಿಯಾಗಲಿದೆ. ಇದನ್ನು ಅರ್ಥಮಾಡಿಕೊಳ್ಳದ ಕೆಲ ಸ್ವಾರ್ಥಿಗಳು ರಾಜಕಾರಣಕ್ಕಾಗಿ ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದವರಿಂದ ಈ ರೀತಿಯ ವರ್ತನೆ ಸರಿಯಲ್ಲ. ಶಾಸಕರ ಈ ಜನಪರ ಕೆಲಸಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿ- ವಿದ್ಯಾರ್ಥಿನಿಯರ ಸಂಪೂರ್ಣ ಬೆಂಬಲ ಇರಲಿದೆ. ಅಭಿವೃದ್ಧಿ ಮೊದಲು ನಂತರ ನಾವು ಎಂಬ ಧೈಯೋದ್ದೇಶದಿಂದ ಕೆಲಸ ಮಾಡುವವರಿಗೆ ನಾವು ಅವರ ಜೊತೆ ಇರುತ್ತೇವೆ. ಶಾಸಕರು ಅಭಿವೃದ್ಧಿ ಕೆಲಸವನ್ನು ಎದೆಗುಂದದೆ ಮುನ್ನಡೆಸಲಿ ಎಂದು ರೈಡ್ ನಾಗರಾಜ್ ಹೇಳಿದರು.
ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ನರಸಿಂಹಯ್ಯ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ನೂರಾರು ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಶಾಸಕರು ಕಾಲಹರಣ ಮಾಡದೇ ದಿನನಿತ್ಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸದಾ ಕಾಲ ಜನರ ಕಷ್ಟಸುಖಗಳಿಗೆ, ಸಾರ್ವಜನಿಕರ ಸಂಘ, ಸಂಸ್ಥೆಗಳಿಗೆ ಶಾಸಕರು ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಕೆಲವರು ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರು ಟೀಕೆ ಮಾಡುವುದನ್ನು ಬಿಟ್ಟು, ಅವರ ಜನೋಪಯೋಗಿ ಕೆಲಸಗಳಿಗೆ ಬೆಂಬಲ ನೀಡಬೇಕೆಂದು ಎಂದು ಹೇಳಿದರು.ಕೆಪಿಸಿಸಿ ಪರಿಶಿಷ್ಟ ವಿಭಾಗದ ಮುಖಂಡ ಕೊಂಕಾಣಿದೊಡ್ಡಿ ಶಿವಲಿಂಗಯ್ಯ ಮಾತನಾಡಿ, ಕಳೆದ 30 ವರ್ಷಗಳಿಂದ ಅಭಿವೃದ್ಧಿ ಕಾಣದ ರಾಮನಗರವನ್ನು ಶಾಸಕ ಇಕ್ಬಾಲ್ ಹುಸೇನ್ ಅವರು ಅಭಿವೃದ್ಧಿ ಮಾಡವಲ್ಲಿ ಶ್ರಮಿಸುತ್ತಿದ್ದಾರೆ. ಅದನ್ನು ಸಹಿಸದವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ. ಶಾಸಕರ ಒಳ್ಳೆಯ ಕೆಲಸಗಳಿಗೆ ಅವರ ಜೊತೆಗೆ ನಾವೆಲ್ಲರೂ ನಿಲ್ಲೋಣ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ರವಿಕುಮಾರ್, ಸದಸ್ಯರಾದ ಆಯಿಷಾಬಾನು, ಎಕ್ಬಾಲ್ ಷರೀಪ್, ಅಣ್ಣು, ಗೋವಿಂದರಾಜು, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪರ್ವೀಜ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್, ಮುಖಂಡರಾದ ಶಿವಶಂಕರ್, ಗುರುವೇಗೌಡ, ಪಾಪಣ್ಣ, ಪ್ರಸನ್ನಕುಮಾರ್, ಶಿವಲಿಂಗಯ್ಯ, ಗುಡ್ಡೆವೆಂಕಟೇಶ್, ದೇವರಾಜು, ಶಿವಪ್ರಕಾಶ್, ದಾಸ್, ರಾಮಣ್ಣ, ಗೋಪಾಲ್, ಲಿಂಗರಾಜು, ಪ್ರಕಾಶ್ ಮತ್ತಿತರರು ಇದ್ದರು.