ವೈದ್ಯರು ದೇವರಿಗೆ ಸಮಾನ ಯಾವುದೇ ಟೀಕೆ-ಟಿಪ್ಪಣಿಗಳಿದ್ದರೂ ಅದನ್ನು ಬದಿಗೊತ್ತಿ, ರೋಗಿಗಳ ಬಗ್ಗೆ ಮಾನವೀಯತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿರಾ ವೈದ್ಯರು ದೇವರಿಗೆ ಸಮಾನ ಯಾವುದೇ ಟೀಕೆ-ಟಿಪ್ಪಣಿಗಳಿದ್ದರೂ ಅದನ್ನು ಬದಿಗೊತ್ತಿ, ರೋಗಿಗಳ ಬಗ್ಗೆ ಮಾನವೀಯತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಬೇಕು. ಸರ್ಕಾರಿ ಸವಲತ್ತುಗಳು ಜನಸಾಮಾನ್ಯರಿಗೆ ತಲುಪುವಲ್ಲಿ ವೈದ್ಯಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಜನರು ಮೆಚ್ಚುವಂತಹ ರೀತಿಯಲ್ಲಿ ಕೆಲಸ ಮಾಡುವುದು ನಮ್ಮೆಲ್ಲರ ಗುರಿಯಾಗಲಿ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಶಿರಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಯಿ ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬ ಮಹತ್ವಾಂಕ್ಷೆಯಿಂದ ನಿರ್ಮಿಸಿದ ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತುಮಕೂರು ನಗರದ ನಂತರ ಅತಿ ಹೆಚ್ಚು ಗರ್ಭಿಣಿಯರು ಹೆರಿಗೆಗೆ ಬರುತ್ತಾರೆ. ಶಿರಾ ತಾಲೂಕಿನ ಆರೋಗ್ಯ ಸೇವೆ ಇಂದು ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. ಪ್ರತಿ ನಿತ್ಯ ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಸುಮಾರು ೨,೦೦೦ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನ ಸುಮ್ಮನೆ ಆಸ್ಪತ್ರೆಗೆ ಬರುವುದಿಲ್ಲ, ಇಲ್ಲಿನ ವೈದ್ಯಕೀಯ ಸೌಲಭ್ಯ ಮತ್ತು ಸಲಹೆಗಳ ಮೇಲೆ ವಿಶ್ವಾಸವಿಟ್ಟು ಬರುತ್ತಾರೆ ಎಂದರು. ೧೫ನೇ ಹಣಕಾಸು ಯೋಜನೆಯಡಿ ಸುಮಾರು ೧ ಕೋಟಿ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ೯ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಮಂಜೂರು ಮಾಡಿದ್ದೆ. ಸದ್ಯ ಆಯುಷ್ ಆಸ್ಪತ್ರೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಈ ಆಸ್ಪತ್ರೆಗೆ ಶಾಶ್ವತ ಕಟ್ಟಡದ ಅವಶ್ಯಕತೆ ಇರುವುದರಿಂದ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ೯ ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ತಾಲೂಕು ವೈದ್ಯಾಧಿಕಾರಿ ಸಿದ್ದೇಶ್, ಪ್ರಸೂತಿ ತಜ್ಞ ಡಿ.ಎಂ. ಗೌಡ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್. ಮಂಜುನಾಥ್, ಪೌರಾಯುಕ್ತ ಕೆ. ರುದ್ರೇಶ್, ನಗರಸಭೆ ಸದಸ್ಯರಾದ ಇರ್ಷಾದ್ ಪಾಶ, ಮೊಹಮ್ಮದ್ ರಫಿ, ಫಾರ್ಮನ್ ಖಾನ್, ಸಫೀರ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷೆ ಶೋಭ ನಾಗರಾಜು, ಸದಸ್ಯರಾದ ಸಬಿಹಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.