ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ದಾವಣಗೆರೆ ಜನರ ದಶಕಗಳ ಕನಸಾದ ಸಾಫ್ಟ್‌ವೇರ್ ಪಾರ್ಕ್ ಆದಷ್ಟು ಬೇಗನೆ ಸಾಕಾರಗೊಳ್ಳಲಿದ್ದು, ಆದಷ್ಟು ಬೇಗನೆ ಇಲ್ಲಿಯೇ ಐಟಿ ಬಿಟಿ ಉದ್ಯಮಗಳು ಕಾರ್ಯಾರಂಭ ಮಾಡಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಆಫ್ ಇಂಡಿಯಾ, ವಿಷನ್ ದಾವಣಗೆರೆ ಹಾಗೂ ದಾವಣಗೆರೆಯ ಐಟಿ ಬಿಟಿ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಟಿಪಿಐ-ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾವಣಗೆರೆ ಜನರ ಸಾಫ್ಟ್ ವೇರ್ ಪಾರ್ಕ್ ಆಗಬೇಕೆಂದ ಕನಸು ಇನ್ನು ಕೆಲವೇ ಕೆಲ ದಿನಗಳಲ್ಲಿಯೇ ನನಸಾಗಲಿದೆ ಎಂದರು.
ಎಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗ ಅರಸಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ನೆರೆ ಜಿಲ್ಲೆ, ಪರ ರಾಜ್ಯ, ಪರ ದೇಶಗಳ ಅವಲಂಬನೆ ಇಲ್ಲದೇ, ಸ್ಥಳೀಯವಾಗಿ ನಮ್ಮದೇ ಜಿಲ್ಲೆಯಲ್ಲೇ ಇದ್ದುಕೊಂಡು, ಕೆಲಸ ಮಾಡುವ ದಿನಗಳು ಸಮೀಪಿಸುತ್ತಿವೆ. ಪ್ರತಿಭಾ ಪಲಾಯನವೆಂಬ ಹಣೆಪಟ್ಟಿಯನ್ನು ಕಳಚಿ ಹಾಕಿ, ನಮ್ಮೂರ ಪ್ರತಿಭೆಗಳಿಗೆ ನಮ್ಮೂರಲ್ಲೇ ಉದ್ಯೋಗ ಸಿಗುವಂತಹ ದಿನ ಸಮೀಪಿಸಿವೆ ಎಂದು ತಿಳಿಸಿದರು.ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ ನಾವೀನ್ಯತೆಗೆ ಚಾಲನೆ ನೀಡಲು ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು, ಐಟಿ ಬಿಟಿ ಕ್ಷೇತ್ರದಲ್ಲಿ ದಾವಣಗೆರೆಯನ್ನು ಜಾಗತಿಕ ಮಟ್ಟಕ್ಕೆ, ಮೇರು ಪಥದಲ್ಲಿ ಕೊಂಡೊಯ್ಯಲು ಯೋಜನೆ ರೂಪಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಾಫ್ಟ್‌ವೇರ್ ಪಾರ್ಕ್ ಜತೆಗೆ 25-30 ಎಕರೆ ವಿಸ್ತೀರ್ಣದಲ್ಲಿ ಶೀಘ್ರವೇ ಡಾಟಾ ಸೆಂಟರ್ ಸ್ಥಾಪಿಸಲಾಗುವುದು ಎಂದರು.
ಈಗಾಗಲೇ ಐಟಿ ಹಬ್ ಸ್ಥಾಪನೆಗೆ ಪ್ರಸ್ತಾಪಿಸಿದ್ದು, ಅದನ್ನು ನೀವು ಅಭಿವೃದ್ಧಿಪಡಿಸಿಕೊಂಡು ಹೋಗುವಂತೆ 4 ಪುಟದ ಮಾಹಿತಿಯನ್ನು ಸಚಿವರು ನೀಡಿದ್ದರು. ಇನ್ನು 6 ತಿಂಗಳಲ್ಲಿ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಅ.15ರಿಂದ 2 ದಿನ ಕೃತಕ ಬುದ್ಧಿಮತ್ತೆ (ಎಐ), ಬಿಗ್ ಡೆಟಾ, ಎಡಿಎ ಟೂಲ್ಸ್, ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್, ಡಿಸೈನ್ ಐಪಿಗಳು, ರೋಬೋಟಿಕ್ಸ್ ಇನ್ ಎಜುಕೇಷನ್ ಇಂಡಸ್ಟ್ರಿ ಹಾರ್ಡ್‌ವೇರ್, ಸಾಫ್ಟ್‌ವೇರ್ ತಂತ್ರಾಂಶಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದೆ ಎಂದರು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ವಿಷನ್ ಟೀಂ ನಾಸಿಕ್ ಮತ್ತು ಚೆನ್ನೈನ ಡಾಟಾ ಸೆಂಟರ್‌ಗೆ ಭೇಟಿ ನೀಡಲಾಗುವುದು. ಎಸ್‌ಟಿಪಿಐ ಮತ್ತು ಕಿಯೋನಿಕ್ಸ್ ಸಂಸ್ಥೆಗಳಿಗೆ ತಲಾ 4 ಎಕರೆ ಜಮೀನು ಮಂಜೂರು ಮಾಡಿದೆ. 25-30 ಎಕರೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಗಾಲ್ಪ್ ಕೋರ್ಟ್ ಅನ್ನು ತೆರೆಯಲು ಸಹ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಇಂಟಲ್ ಸಂಸ್ಥೆಯ ಸ್ಯೂಮುಯಲ್ ದೊರೈರಾಜ್, ಕೆಡಿಇಎಂ ಪ್ರೊಗ್ರಾಮ್ ಡೈರೆಕ್ಟರ್ ಸುವಿನ್ ನಾರಾಯಣ, ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಬಿ.ಅರವಿಂದ, ದವನ್ ಮತ್ತು ನೂತನ ಕಾಲೇಜು ಮುಖ್ಯಸ್ಥ ಕಕ್ಕರಗೊಳ್ಳ ವೀರೇಶ ಪಟೇಲ್, ಪ್ರಶಾಂತ ಇತರರು ಇದ್ದರು.ಎಸ್‌ಟಿಪಿಐ ಭಿತ್ತಿಪತ್ರವನ್ನು ಸಂಸದರು ಬಿಡುಗಡೆ ಮಾಡಿದರು. ಜೈನ್ ತಾಂತ್ರಿಕ ಕಾಲೇಜು, ಯುಬಿಡಿಟಿ, ಜಿಎಂಐಟಿ ಕಾಲೇಜು ಮತ್ತು ಬಿಐಇಟಿ ಕಾಲೇಜು ವಿದ್ಯಾರ್ಥಿಗಳು ಸೇರಿ ಅನೇಕರು ಇದ್ದರು.