ಚಳಿ ಚಳಿ ತಾಳೆನು ಈ ಚಳಿಯಾ...

| Published : Dec 18 2024, 12:45 AM IST

ಸಾರಾಂಶ

"ಚಳಿ ಚಳಿ ತಾಳೆನು ಈ ಚಳಿಯಾ... ಆಹಾ... " ಎಂಬ ಹಾಡು ಈಗ ಮಧ್ಯ ಕರ್ನಾಟಕವೇನು, ಇಡೀ ಕರ್ನಾಟಕದಲ್ಲೇ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಈ ಬಾರಿಯ ಚಳಿಗಾಲದ ಮಹಿಮೆ! ಹೌದು. ಮಾಗಿ ಚಳಿಗೆ ದಾವಣಗೆರೆ ನಗರ, ಜಿಲ್ಲೆಯ ಜನರು, ಜಾನುವಾರುಗಳು ತತ್ತರಿಸುತ್ತಿವೆ. ಆರಂಭದಲ್ಲೇ ದಿನದಿನಕ್ಕೂ ಮೂಳೆ ಕೊರೆಯುವಂಥ ಚಳಿ ತೀವ್ರತೆ ಪಡೆಯುತ್ತಿದ್ದು, ಜನರು ಥಂಡಾ ಹೊಡೆಯುವಂತೆ ಮಾಡುತ್ತಿದೆ.

- ಮಾಗಿ ಚಳಿಗೆ ದಿನದಿನಕ್ಕೂ ನಲುಗುತಿದೆ ಮಧ್ಯ ಕರ್ನಾಟಕ ।

- - - ಕನ್ನಡಪ್ರಭ ವಾರ್ತೆ ದಾವಣಗೆರೆ

"ಚಳಿ ಚಳಿ ತಾಳೆನು ಈ ಚಳಿಯಾ... ಆಹಾ... " ಎಂಬ ಹಾಡು ಈಗ ಮಧ್ಯ ಕರ್ನಾಟಕವೇನು, ಇಡೀ ಕರ್ನಾಟಕದಲ್ಲೇ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಈ ಬಾರಿಯ ಚಳಿಗಾಲದ ಮಹಿಮೆ!

ಹೌದು. ಮಾಗಿ ಚಳಿಗೆ ದಾವಣಗೆರೆ ನಗರ, ಜಿಲ್ಲೆಯ ಜನರು, ಜಾನುವಾರುಗಳು ತತ್ತರಿಸುತ್ತಿವೆ. ಆರಂಭದಲ್ಲೇ ದಿನದಿನಕ್ಕೂ ಮೂಳೆ ಕೊರೆಯುವಂಥ ಚಳಿ ತೀವ್ರತೆ ಪಡೆಯುತ್ತಿದ್ದು, ಜನರು ಥಂಡಾ ಹೊಡೆಯುವಂತೆ ಮಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ನಸುಕಿನಲ್ಲಿ ಇಬ್ಬನಿ ಜೊತೆಗೆ ಮೈಕೊರೆಯುವ ಚಳಿಯೂ ಶುರುವಾಗಿದೆ. ಡಿಸೆಂಬರ್ ಚಳಿ ಅಂದರೆ ಏನೆಂಬುದನ್ನು ಜನರಿಗೆ ಅಕ್ಷರಶಃ ಪ್ರಕೃತಿ ಗಡಗಡ ನಡುಗುವಂತೆ ತೋರಿಸುತ್ತಿದೆ. ಮೈ ಕೊರೆವ ಚಳಿಯ ಅನುಭವ ಜನರಿಗೆ ಆಗುತ್ತಿದೆ. ಶೀತಗಾಳಿಯಿಂದಾಗಿ ಜನರು ನಡುಗಲಾರಂಭಿಸಿದ್ದಾರೆ. ಶೀತ, ಕೆಮ್ಮು, ಕಫ, ಜ್ವರ, ಚಳಿಜ್ವರ ಹೀಗೆ ಸಣ್ಣಪುಟ್ಟ ಕಾಯಿಲೆಗಳು ಜನರಿಗೆ ಕಾಣಿಸಿಕೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

ಡಿಸೆಂಬರ್ ಮೊದಲ 2-3 ದಿನಗಳಿಂದಲೇ ಶುರುವಾದ ಚಳಿಗಾಲವು ನಗರ, ಜಿಲ್ಲೆಯ ಜನರಿಗೆ ಚಳಿಯಲ್ಲಿ ನಡುಗುವಂತೆ ಮಾಡುತ್ತಿದೆ. ಬಿಸಿಲಿನಿಂದ ಒಂದು ಕ್ಷಣ ನೆರಳಿಗೆ ಬಂದರೂ ಸಾಕು, ಚಳಿಯ ಅನುಭವ ಜನರಿಗೆ ಆಗುತ್ತಿದೆ. ದಾವಣಗೆರೆ ಜಿಲ್ಲೆ ಮಂದಿ ಎಸಿ, ಫ್ಯಾನ್ ಇಲ್ಲದಿದ್ದರೆ ಜೀವನವೇ ಇಲ್ಲವೇನೋ ಅಂದುಕೊಂಡಿದ್ದವರು. ಆದರೆ ಈಗ, ಸಂಜೆಯಾಗುತ್ತಲೇ ಅವುಗಳನ್ನೆಲ್ಲಾ ಆಫ್ ಮಾಡಿ, ಬೆಚ್ಚನೆಯ ಅನುಭವಕ್ಕಾಗಿ ಹಾತೊರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಶೀತಗಾಳಿ ಪರಿಣಾಮ ಜನರು ಸಹ ಕೆಲಸ, ಕಾರ್ಯಗಳ ಮುಗಿಸಿ, ಬೇಗ ಬೇಗನೆ ಮನೆ ಸೇರಿಕೊಳ್ಳುವ ತವಕ ಕಂಡುಬರುತ್ತಿದೆ. ಸ್ವೆಟರ್‌, ಜರ್ಕಿನ್, ಉಣ್ಣೆ ಬಟ್ಟೆಗಳು ಸೇರಿದಂತೆ ಬೆಚ್ಚನೆಯ ವಸ್ತುಗಳು, ಕುರುಕಲು ತಿಂಡಿಗಳು, ಕಂಬಳಿ-ಬೆಡ್‌ಶೀಟ್‌ಗಳು, ಬಿಸಿ ಬಿಸಿ ಊಟ, ಪಾನೀಯಗಳಿಗೆ ಜನ ಮೊರೆ ಹೋಗುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಹೀಗೆ ಎಲ್ಲರೂ ಚಳಿಯಿಂದಾಗಿ ತತ್ತರಿಸುತ್ತಿದ್ದಾರೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಚಳಿಗೆ ತತ್ತರಿಸುತ್ತಿವೆ.

ಹಗಲಿಡಿ ಕೆಲಸ ಮಾಡಿ, ಸಂಜೆ ಮನೆ ಸೇರಿ ಮಾರನೇ ದಿನ ಹೊರಬರುವವರೇ ಹೆಚ್ಚು. ಚಳಿಗಾಲದಲ್ಲಿ ಇವರದು ಒಂದು ಕಥೆಯಾದರೆ, ರಾತ್ರಿ ಪಾಳಿ ಕೆಲಸ ಮಾಡುವವರು, ರಾತ್ರಿವೇಳೆ, ನಸುಕಿನಲ್ಲಿ ಕೆಲಸಕ್ಕೆ ಹೋಗಬೇಕಾದವರದೇ ಇನ್ನೊಂದು ಪರಿಪಾಟಲು. ವಾಚ್ ಮನ್ ಕೆಲಸ ಮಾಡುವವರು, ಆಸ್ಪತ್ರೆ ಇತರೆಡೆ ರಾತ್ರಿ ಕಾರ್ಯನಿರ್ವಹಿಸುವವರು, ನಸುಕಿನಲ್ಲೇ ಕೆಲಸಕ್ಕೆ ಹೋಗುವ ಪೌರ ಕಾರ್ಮಿಕರು, ಪತ್ರಿಕಾ ಮುದ್ರಕರು, ಪತ್ರಿಕಾ ವಿತರಕರು, ಹಾಲು ವಿತರಕರು, ದಿನಸಿ ಅಂಗಡಿ, ಹಣ್ಣು, ತರಕಾರಿ, ಹೂವಿನ ವ್ಯಾಪಾರಸ್ಥರ, ರೈತರು, ಬಸ್ಸು-ಲಾರಿ, ಆಟೋ ಇತರೆ ವಾಹನ ಚಾಲಕರ, ನಿರ್ವಾಹಕರು ಚಳಿಯಲ್ಲೇ ನಡುಗುತ್ತ ಹೊಟ್ಟೆಹೊರೆದುಕೊಳ್ಳುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ದೇಹವನ್ನು ಕಾವೇರಿಸಲು ಒಂದೆಡೆ ಬೆಂಕಿ ಹಾಕಿ, ಎಲ್ಲರೂ ಸುತ್ತಲು ಕುಳಿತು ಮೈ ಕಾಯಿಸಿಕೊಳ್ಳುವಂತಾಗಿದೆ. ರಾತ್ರಿ 10-11ರಿಂದ ಬೆಳಗಿನ ಆರೇಳು ಗಂಟೆವರೆಗೆ ತಾಪಮಾನ ಸಾಕಷ್ಟು ಕಡಿಮೆಯಾಗುತ್ತಿದೆ. ವಾಕ್ ಮಾಡಲು ಜನ ಹಿಂದೇಟು ಹಾಕುವಷ್ಟರ ಮಟ್ಟಿಗೆ ಚಳಿ ಮೈಕೊರೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಲೆನಾಡಿನ ಚಳಿಯ ಅನುಭವ ಜನರಿಗಾಗುತ್ತಿದೆ. ನವೆಂಬರ್‌ವರೆಗೆ ಸುರಿದ ಭಾರಿ ಮಳೆಯಿಂದಾಗಿ ಇಳೆ ತಂಪಾಗಿರೋದೂ ಚಳಿ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರ ಭಾರತದ ಶೀತಗಾಳಿ ಸುದ್ದಿ ಬಗ್ಗೆ ಕೇಳಿದ್ದ ಜನರಿಗೆ ಐದಾರು ದಿನಗಳಿಂದ ಅಂತಹ ಅನುಭವ ದಾವಣಗೆರೆ ಜಿಲ್ಲೆಯಲ್ಲೇ ತಕ್ಕಮಟ್ಟಿಗೆ ದರ್ಶನವಾಗುತ್ತಿದೆ.

ಚಳಿ ಪರಿಣಾಮ ಪದೇಪದೇ ಟೀ, ಕಾಫಿ ಕುಡಿಯೋದು, ಹುರಿದ, ಕರಿದ ತಿನಿಸು, ಕಾರಾ ಮಂಡಕ್ಕಿ, ನರ್ಗೀಸ್, ಬಿಸಿ ಬಿಸಿ ಮೆಣಸಿನಕಾಯಿ, ತಿನ್ನವಾಟ ಜಾಸ್ತಿಯೇ ಆಗುತ್ತಿದೆ. ಸಂಜೆಯಾಗುತ್ತಲೆ ಜನರಿಗೆ ಈ ಎಲ್ಲ ಬಯಕೆಗಳೂ ಮೂಡುತ್ತಿವೆ. ಬೀದಿಬದಿ ತಳ್ಳುಗಾಡಿಗಳು, ಹೋಟೆಲ್‌ಗಳಲ್ಲಿ ಬಾಯಿ ರುಚಿ ತಣಿಸುವ ತಿನಿಸುಗಳ ಖರೀದಿಗಾಗಿ ಜನ ಮುಗಿಬೀಳುತ್ತಿದ್ದಾರೆ. ಪಾನಪ್ರಿಯರಂತೂ ಕೆಲಸ, ವ್ಯಾಪಾರ, ವಹಿವಾಟು ಮುಗಿಸಿ ಬಾರ್‌-ರೆಸ್ಟೋರೆಂಟ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಚಳಿಯಿಂದಾಗಿಯೇ ಶೇ.15-20ರಷ್ಟು ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ಬಾರ್‌ಗೆ ಬರುತ್ತಿದ್ದವರು ಚಳಿಗೆ ಹೆದರಿ, ಮನೆಗೆ ಪಾರ್ಸೆಲ್ ಅಲ್ಲಿಯೇ ಬಳಸುತ್ತಿದ್ದಾರೆ. ರಮ್, ವಿಸ್ಕಿ, ಬ್ರಾಂಡಿಯಂತಹ ಹಾಟ್ ಡ್ರಿಂಕ್ಸ್‌ಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮದ್ಯದ ವ್ಯಾಪಾರಸ್ಥರು.

- - - -17ಕೆಡಿವಿಜಿ14.ಜೆಪಿಜಿ: ತಣಿಗೆರೆ ಧನುಷ್ ಎಸ್‌. ಸಾಹುಕಾರ್.

-17ಕೆಡಿವಿಜಿ15: ಹೈಸ್ಕೂಲ್ ವಿದ್ಯಾರ್ಥಿನಿ ಪೂಜಾ. -17ಕೆಡಿವಿಜಿ16: ತಿಲಕ್ ಕುಮಾರ ಬಿ.ಗುಬ್ಬಿ.