ಸಾರಾಂಶ
ಶಿರಹಟ್ಟಿ: ಕ್ರೀಡೆಗಳಲ್ಲಿ ಗೆಲ್ಲುವುದು ಮುಖ್ಯವಲ್ಲ. ಪಾಲ್ಗೊಳ್ಳುವುದು ಬಹಳ ಮುಖ್ಯ. ಉತ್ತಮ ಆರೋಗ್ಯ ಕಾಪಾಡುವುದಕ್ಕಾಗಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ಶುಕ್ರವಾರ ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಪ್ರಾಥಮಿಕ ಶಾಲಾ ಶಿರಹಟ್ಟಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು.ಪ್ರತಿಭಾನ್ವಿತ ಕ್ರೀಡಾಪಟುವಾಗಲು ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡಾ ಸಾಧನೆ ಮಾಡುವುದು ಅಗತ್ಯ. ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಸದೃಢಗೊಳಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳಿ ಎಂದು ತಿಳಿಸಿದರು.
ಕ್ರೀಡೆಯು ಒತ್ತಡದಲ್ಲಿರುವ ಮನುಷ್ಯನ ಮನಸ್ಸು ನಿಯಂತ್ರಿಸಿ ಸದಾ ಆರೋಗ್ಯ ಮತ್ತು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಾದ ಕ್ರಿಕೆಟ್, ಒಲಂಪಿಕ್ಸ್‌ನಲ್ಲಿ ನಮ್ಮ ರಾಜ್ಯ, ರಾಷ್ಟ್ರದ ಮಕ್ಕಳು ಭಾಗವಹಿಸಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿ ಮೆಡಲ್ ಪಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.ಕೇವಲ ಗ್ರಾಮೀಣ ಮಟ್ಟದಲ್ಲಿ ಭಾಗವಹಿಸಿ ಇಲ್ಲಿಗೆ ಸೀಮಿತವಾಗದೇ ಕ್ರೀಡೆಯಲ್ಲಿ ಸತತ ಸಾಧನೆ ಮಾಡಿ ರಾಜ್ಯ,ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಕ್ರೀಡಾಪಟುಗಳಿಗೆ ತಮ್ಮ ಪ್ರೋತ್ಸಾಹ ಸದಾ ಇರುತ್ತದೆ. ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳು ಅರಳಬೇಕಾದರೆ ಎಲ್ಲರ ಪ್ರೋತ್ಸಾಹ ಬೇಕು ಎಂದರು.
ರಾಣಿ ಚೆನ್ನಮ್ಮ ಬಾಲಕಿಯರ ವಸತಿ ನಿಲಯದ ಪ್ರಾಚಾರ್ಯ ನಾಗರಾಜ ಕಳಸಾಪೂರ ಮಾತನಾಡಿ, ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಇದರಿಂದ ಸೋಮಾರಿತನ ಹೋಗುತ್ತದೆ. ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಇದರಿಂದ ಬಾಂಧವ್ಯ, ಸಹೋದರತ್ವ ಬೆಳೆಯುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರು ಮತ್ತು ಕ್ರೀಡಾ ಆಯೋಜಕರು ಯಾವುದೇ ಗದ್ದಲ, ಗಲಾಟೆಗಳಿಗೆ ಅವಕಾಶ ನೀಡದೇ ಯಶಸ್ವಿಯಾಗಿ ಕ್ರೀಡಾಕೂಟ ನಡೆಸಬೇಕೆಂದು ಸಲಹೆ ನೀಡಿದರು.ಕ್ರೀಡೆ ಹಾಗೂ ಸಾಂಸ್ಕೃತಿಕ ಬಗ್ಗೆ ನಮ್ಮ ಜನರಲ್ಲಿ ಪ್ರೀತಿ ಇದೆ. ಕ್ರೀಡೆಯಲ್ಲಿ ಪೈಪೋಟಿಯಿದ್ದಂತೆ ಜೀವನದಲ್ಲಿ ಎದುರಾಗುವ ಸವಾಲು ಸಮರ್ಥವಾಗಿ ಎದುರಿಸಬೇಕು. ಕ್ರೀಡೆಯು ಮನುಷ್ಯನ ಜೀವನದಲ್ಲಿ ಅತೀ ಅವಶ್ಯಕವಾಗಿದ್ದು, ದೈಹಿಕ ಮಾನಸಿಕವಾಗಿ ಬೆಳೆಯಲು ಕ್ರೀಡೆಗಳು ಸಹಕಾರಿಯಾಗಲಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಕ್ರೀಡೆಯಲ್ಲಿ ಪ್ರತಿನಿಧಿಸುವ ನಿಟ್ಟಿನಲ್ಲಿ ಗುರಿ ಹೊಂದಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಪಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಶಿಕ್ಷಣ ಸಂಯೋಜಕ ಹರೀಶ, ಶಿಕ್ಷಕ ಬಿ.ಬಿ. ಕಳಸಾಪೂರ. ಎಂ.ಕೆ. ದ್ಯಾವನೂರ, ಸುನೀಲ್ ಚವ್ಹಾಣ, ವೀರೇಶ ಲಮಾಣಿ, ಯುವರಾಜ ಲಮಾಣಿ, ಬುಕಿಟಗಾರ, ಎಂ.ಐ. ಕಣಕೆ ಮತ್ತಿತರರು ಉಪಸ್ಥಿತರಿದ್ದರು.