ಸಾರಾಂಶ
ನೊಬೆಲ್ ಪಾರಿತೋಷಕ ಪುರಸ್ಕೃತ ತಂದೆ- ಮಕ್ಕಳ ಜೋಡಿ ಪುಸ್ತಕವನ್ನು ವೆಂಕಟರಾಮಯ್ಯ ಅವರು ರಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತ ನೊಬೆಲ್ ಪಾರಿತೋಷಕ ಪಡೆದು ಶತಮಾನವಾಗುತ್ತ ಬಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಳವಳ ವ್ಯಕ್ತಪಡಿಸಿದರು.ಮಾನಸ ಗಂಗೋತ್ರಿಯ ಭೌತಶಾಸ್ತ್ರ ಅಧ್ಯಯನ ವಿಭಾಗದ ಐನ್ ಸ್ಟೈನ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಪಿ. ವೆಂಕಟರಾಮಯ್ಯ ಅವರು ರಚಿಸಿದ ‘ನೊಬೆಲ್ ಪಾರಿತೋಷಕ ಪುರಸ್ಕೃತ ತಂದೆ-ಮಕ್ಕಳ ಜೋಡಿಗಳು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನೊಬೆಲ್ ಪಾರಿತೋಷಕ ಪುರಸ್ಕೃತ ತಂದೆ- ಮಕ್ಕಳ ಜೋಡಿ ಪುಸ್ತಕವನ್ನು ವೆಂಕಟರಾಮಯ್ಯ ಅವರು ರಚಿಸಿದ್ದಾರೆ. ತಂದೆ ಮಕ್ಕಳು ನೊಬೆಲ್ ಪಡೆಯುವುದು ಸಾಮಾನ್ಯದ ಕೆಲಸವಲ್ಲ. ಭಾರತದಲ್ಲಿ ಸಿನಿಮಾ ಮತ್ತು ರಾಜಕೀಯದಲ್ಲಿ ಮಾತ್ರ ತಂದೆ- ಮಕ್ಕಳು ಸಿಗುತ್ತಾರೆ. ಆದರೆ ವಿಜ್ಞಾನ ಕ್ಷೇತ್ರದ ಸಾಧನೆ ಅಷ್ಟು ಸುಲಭವಲ್ಲ. ಭಾರತ ನೊಬೆಲ್ ಪಾರಿತೋಷಕ ಪಡೆದು ನೂರು ವರ್ಷವಾಗುತ್ತಿದೆ. ನೊಬೆಲ್‌ಪಡೆಯಲು ಹೆಚ್ಚಿನ ಅಧ್ಯಯನ, ಬುದ್ಧಿಮತ್ತೆ ಬೇಕು ಎಂದರು.ಕನ್ನಡದಲ್ಲಿ ಹೆಚ್ಚು ಹೆಚ್ಚು ವಿಜ್ಞಾನ ಪುಸ್ತಕಗಳು ಬರುವಂತೆ ಆಗಬೇಕು. ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅವರು ರಚಿಸಿರುವ ಕೃತಿಯು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. 124 ಪುಟಗಳನ್ನು ಹೊಂದಿರುವ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಎಂದರು.
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಎನ್. ಪ್ರಸಾದ್ ಮಾತನಾಡಿ, ನೊಬೆಲ್ ಪ್ರಶಸ್ತಿ ಪಡೆದ ಅಪ್ಪ-ಮಕ್ಕಳ ಬಗ್ಗೆ ಬರೆದಂತೆ ಅವರ ಕುಟುಂಬದ ಬಗ್ಗೆಯೂ ಬರೆಯಬೇಕು. ಏಕೆಂದರೆ ಅವರ ಕೊಡುಗೆ, ಸಹಕಾರವೂ ಇರುತ್ತದೆ. ಮೇರಿ ಕ್ಯೂರಿ ಅವರ ಇಡೀ ಕುಟುಂಬ ವಿಜ್ಞಾನಕ್ಕೆ ಕೊಡುಗೆ ನೀಡಿದೆ. ಭಾರತದಲ್ಲಿ ಸಿ.ವಿ.ರಾಮನ್, ಎಸ್. ಚಂದ್ರಶೇಖರ್ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಹೀಗಾಗಿ ಕುಟುಂಬ ಪರಿಗಣಿಸಿ ಮುಂದಿನ ದಿನಗಳಲ್ಲಿ ಪುಸ್ತಕ ಬರಬೇಕು ಎಂದು ಅವರು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್. ರಾಮೇಗೌಡ, ಕೃತಿ ಕೃರ್ತ ಪ್ರೊ.ಪಿ. ವೆಂಕಟರಾಮಯ್ಯ, ಪ್ರಕಾಶಕ ಡಿ.ಎನ್. ಲೋಕಪ್ಪ ಇದ್ದರು.