ನನ್ನದು ಗರ್ವವಲ್ಲ, ಕನ್ನಡಿಗರ ಸ್ವಾಭಿಮಾನ: ಸಿದ್ದು

| Published : Mar 31 2024, 02:00 AM IST / Updated: Mar 31 2024, 09:01 AM IST

ಸಾರಾಂಶ

‘ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ಆದರೆ, ಕನ್ನಡಿಗರ ರಕ್ತದಲ್ಲಿರುವ ಸ್ವಾಭಿಮಾನ, ಕನ್ನಡ-ಕನ್ನಡಿಗ-ಕರ್ನಾಟಕ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ನನ್ನದು 

  ಬೆಂಗಳೂರು :  ‘ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ಆದರೆ, ಕನ್ನಡಿಗರ ರಕ್ತದಲ್ಲಿರುವ ಸ್ವಾಭಿಮಾನ, ಕನ್ನಡ-ಕನ್ನಡಿಗ-ಕರ್ನಾಟಕ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ನನ್ನದು ಎನ್ನುವುದನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಗಮನಕ್ಕೆ ತರಬಯಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕು ಎಂಬ ಎಚ್‌.ಡಿ. ದೇವೇಗೌಡ ಅವರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ವೈಯಕ್ತಿಯ ಅಥವಾ ರಾಜಕೀಯ ಲಾಭಕ್ಕಾಗಿ ಯಾರ ಜತೆಗೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜತೆಯಲ್ಲಿ ಎಚ್‌.ಡಿ.ದೇವೇಗೌಡ ಅವರಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ.

ದೇವೇಗೌಡ ಅವರ ಜತೆಯಲ್ಲಿ ನನಗೆ ರಾಜಕೀಯವಾಗಿ ಭಿನ್ನಾಭಿಪ್ರಾಯವಿದ್ದರೂ, ನಮ್ಮ ನೆಲ, ಜಲ ಮತ್ತು ಭಾಷೆ ರಕ್ಷಣೆಯ ಬಗೆಗಿನ ಅವರ ನಿಲುವಿನ ಬಗ್ಗೆ ಗೌರವವಿತ್ತು. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ 10 ವರ್ಷಗಳಿಂದ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದೆ. ನಾಡಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆ, ವಿವಿಧ ಜಲವಿವಾದಗಳಲ್ಲಿ ಅನ್ಯಾಯ ಹೀಗೆ ಹಲವು ವಿಚಾರದಲ್ಲಿ ರಾಜ್ಯಕ್ಕೆ ದ್ರೋಹವಾಗಿದೆ. ಆದರೂ, ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿ ಮತ್ತು ಶಾ ಬಳಿ ಪರಿಹಾರವಿದೆ ಎಂದು ದೇವೇಗೌಡರು ಹೇಳಿದ್ದಾರೆ. ಹೀಗೆ ಹೇಳುವಾಗ ಅವರಿಗೆ ಆತ್ಮಸಾಕ್ಷಿ ಚುಚ್ಚಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ. ಬೇರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ಮಾತನಾಡುತ್ತಿವೆ. ಆದರೆ, ಕರ್ನಾಟಕದ ಜೆಡಿಎಸ್‌ ಮಾತ್ರ ನಮ್ಮ ನೆಲ-ಜಲ-ಭಾಷೆಯ ವಿರೋಧಿಗಳ ಒತೆಯಲ್ಲಿ ರಾಜಿ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಎಸಗಿದೆ. ರಾಜಕೀಯ ಲಾಭಕ್ಕೆ ಮೈತ್ರಿ ಮಾಡಿಕೊಂಡು ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದ್ದೀರಿ. ಈ ದ್ರೋಹಕ್ಕೆ ನೀವು ಮತ್ತು ನಿಮ್ಮ ಪಕ್ಷ ಭಾರೀ ಬೆಲೆ ತೆರುವುದು ಖಚಿತ ಎಂದು ಎಂದಿದ್ದಾರೆ.

70 ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ ಎಂದು ನೀವು ಶರಣಾಗತಿಯ ಹೇಳಿಕೆ ನೀಡಿದ್ದೀರಿ. ಹಾಗೆ ಹೇಳುವಾಗ ನಿಮ್ಮ ಆತ್ಮಾಭಿಮಾನ ಕುಟುಕಲಿಲ್ಲವೇ? ಈ ರೀತಿಯ ಶರಣಾಗತಿ ಕನ್ನಡಿಗರಿಗೆ ಮಾಡುವ ದ್ರೋಹ ಎಂದೆನಿಸಲಿಲ್ಲವೇ? ನಿಮ್ಮೊಳಗಿನ ರಾಜಕೀಯ ನಾಯಕ ಅಷ್ಟೊಂದು ದುರ್ಬಲ, ಅಸಹಾಯಕನಾಗಿ ಹೋದನೇ ಎಂದು ಕುಟುಕಿದ್ದಾರೆ.ಸೋಲಿನ ಭೀತಿಯಿಂದ ಬಿಜೆಪಿ ತೆರಿಗೆ ಭಯೋತ್ಪಾದನೆ: ಸಿದ್ದುಬೆಂಗಳೂರು: ಲೋಕಸಭಾ ಚುನಾವಣೆ ಸೋಲಿನ ಭೀತಿಯಿಂದ ಬಿಜೆಪಿ ಐಟಿ, ಇಡಿ, ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹುನ್ನಾರದ ಭಾಗವಾಗಿಯೇ ಕಾಂಗ್ರೆಸ್‌ ಪಕ್ಷದ ವಿರುದ್ಧ ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದ್ದು, ಅದರಿಂದ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆ ಗೆಲ್ಲಬಹುದು ಎಂದು ತಿಳಿದಿದ್ದರೆ ಅದು ಬಿಜೆಪಿಯ ಭ್ರಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ವರಮಾನ ತೆರಿಗೆ ರೂಪದಲ್ಲಿ 1,823 ಕೋಟಿ ರು. ಪಾವತಿಸುವಂತೆ ಐಟಿ ನೀಡಿರುವ ನೋಟಿಸ್‌ ಕುರಿತಂತೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಐಟಿ ಇಲಾಖೆ ಅತಿಕ್ರಿಯಾಶೀಲವಾಗಿದೆ. ಕಾಂಗ್ರೆಸ್‌ ನೋಟಿಸ್‌ ನೀಡಿರುವ ಮಾದರಿಯಲ್ಲಿಯೇ ಟಿಎಂಸಿ, ಸಿಪಿಐ ಸೇರಿದಂತೆ ಇತರ ವಿರೋಧ ಪಕ್ಷಗಳ ಮೇಲೂ ತೆರಿಗೆ ಭಯೋತ್ಪಾದನೆ ಅಸ್ತ್ರ ಪ್ರಯೋಗಿಸಿದೆ. ವಿಪಕ್ಷಗಳ ಮೇಲೆ ಮುಗಿಬಿದ್ದಿರುವ ಐಟಿ ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಕುರುಡಾಗಿದೆ. ಐಟಿ ಇಲಾಖೆ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎನ್ನುವುದು ದೇಶದ ಜನತೆಗೂ ತಿಳಿದಿದೆ ಎಂದರು.ಬಿರ್ಲಾ-ಸಹರಾ ಡೈರಿ ಕಣ್ಣಿಗೆ ಬಿದ್ದಿಲ್ಲವೇ:

ಐಟಿ ಇಲಾಖೆ ಕಾಂಗ್ರೆಸ್‌ ಪಕ್ಷದ ಕೆಲ ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡುತ್ತಿದೆ. ಆದರೆ, ಐಟಿ ಇಲಾಖೆಗೆ ಕರ್ನಾಟಕದಲ್ಲಿಯೇ ಬಯಲಾಗಿದ್ದ ಬಿ.ಎಸ್‌. ಯಡಿಯೂರಪ್ಪ ಡೈರಿ, ನರೇಂದ್ರ ಮೋದಿ ಅವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ಬಿರ್ಲಾ-ಸಹರಾ ಡೈರಿಗಳು ಏಕೆ ಕಣ್ಣಿಗೆ ಬಿದ್ದಿಲ್ಲ? ಹಾಗೆಯೇ ನೀರವ್‌ ಮೋದಿ, ವಿಜಯ್‌ ಮಲ್ಯಯಂತಹ ಬ್ಯಾಂಕ್‌ ವಂಚಕರ 10.09 ಲಕ್ಷ ಕೋಟಿ ರು. ಬ್ಯಾಂಕ್‌ ಸಾಲ ಮನ್ನಾ ಮಾಡಿರುವ ಬಿಜೆಪಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್‌ ಹಣ ಎಷ್ಟು ಎನ್ನುವುದನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.