ಯುವಕರನ್ನು ದೇಶದ ಹಿತಕ್ಕಾಗಿ ಸಜ್ಜುಗೊಳಿಸುವ ಕಾರ್ಯವಾಗಬೇಕು-ಹಿರೇಮಠ

| Published : May 29 2024, 12:46 AM IST

ಸಾರಾಂಶ

ಸ್ವಾರ್ಥ ಸಂಕುಚಿತತೆಯಿಂದ ಕುಬ್ಜಗೊಳ್ಳುತ್ತಿರುವ ಈ ಸಮಾಜದಲ್ಲಿ ದೇಶಭಕ್ತಿ ಹಾಗೂ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಇಚ್ಛಾಶಕ್ತಿಯನ್ನು ಬೆಳೆಸುವ ಅಗತ್ಯವಿದೆಯಲ್ಲದೆ, ಯುವಕರನ್ನು ದೇಶದ ಹಿತಕ್ಕಾಗಿ ಸಜ್ಜುಗೊಳಿಸುವ ಕಾರ್ಯ ನಿರಂತರ ನಡೆಯಬೇಕು ಎಂದು ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ತಿಳಿಸಿದರು.

ಹಾನಗಲ್ಲ: ಸ್ವಾರ್ಥ ಸಂಕುಚಿತತೆಯಿಂದ ಕುಬ್ಜಗೊಳ್ಳುತ್ತಿರುವ ಈ ಸಮಾಜದಲ್ಲಿ ದೇಶಭಕ್ತಿ ಹಾಗೂ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಇಚ್ಛಾಶಕ್ತಿಯನ್ನು ಬೆಳೆಸುವ ಅಗತ್ಯವಿದೆಯಲ್ಲದೆ, ಯುವಕರನ್ನು ದೇಶದ ಹಿತಕ್ಕಾಗಿ ಸಜ್ಜುಗೊಳಿಸುವ ಕಾರ್ಯ ನಿರಂತರ ನಡೆಯಬೇಕು ಎಂದು ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ತಿಳಿಸಿದರು.ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಸ್ಥಳೀಯ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ ಉಚಿತ ಅಗ್ನಿವೀರ ಆರ್ಮಿ ಕೋಚಿಂಗ್ ಒಂದು ತಿಂಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಕುಲ ಕೋಟಿಗೆ ಅನ್ನ ನೀಡುವ ರೈತ, ದೇಶವನ್ನು ಕಾಯುವ ಸೈನಿಕ ನಿಜವಾಗಿ ವಂದನೀಯರು. ಮನುಷ್ಯನ ಸ್ವಾರ್ಥಕ್ಕೆ ಸಮಾಜ ಬಲಿಯಾಗುತ್ತಿರುವ ಈ ದಿನಮಾನಗಳಲ್ಲಿ ಸಾಮಾಜಿಕ ಜಾಗೃತಿ ಬೇಕಾಗಿದೆ. ಮಠ ಮಂದಿರಗಳು ಸಮಾಜದಲ್ಲಿ ಉತ್ತಮ ಸಂಸ್ಕಾರ ನೀಡುವ ಕಾರ್ಯದಲ್ಲಿ ಮುನ್ನಡೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವವರಿಗೆ ಬೆಲೆ ಇಲ್ಲದಂತಾಗುತ್ತಿದೆ. ಇದು ಸಾಮಾಜಿಕ ವೈಕಲ್ಯ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಬರುವ ಪೀಳಿಗೆಯೇ ಆತಂಕದಲ್ಲಿ ಬದುಕಬೇಕಾಗುತ್ತದೆ. ಸೈನ್ಯ ಸಮಾಜ ಸೇವೆಗೆ ಯುವಕರನ್ನು ಸಜ್ಜುಗೊಳಿಸುವ ಅಗತ್ಯ ಈಗ ಬಹಳ ಇದೆ ಎಂದರು.ಅಗ್ನಿವೀರ ಆರ್ಮಿ ಕೋಚಿಂಗ್ ತರಬೇತುದಾರ ನಿವೃತ್ತ ಸೈನಿಕ ಕೆ. ರಾಘವೇಂದ್ರ ಮಾತನಾಡಿ, ಸೈನ್ಯಕ್ಕೆ ಸೇರುವುದೆಂದರೆ ದೇಶದ ಹಿತಕ್ಕೆ ನಮ್ಮನ್ನು ಅರ್ಪಣೆ ಮಾಡಿಕೊಳ್ಳುವುದಾಗಿದೆ. ದೇಶದ ಗಡಿಗಳಲ್ಲಿ ಗುಂಡಿಗೆ ಎದೆಕೊಟ್ಟು ನಿಲ್ಲುವ ಪ್ರಸಂಗಗಳು ಇರುತ್ತವೆ. ವೈರಿಗಳನ್ನು ಸದೆಬಡಿಯಲು ಸದಾ ಸಿದ್ಧರಾಗಿರಬೇಕಾಗುತ್ತದೆ. ದೇಶಭಕ್ತಿ ಇದ್ದರೆ ಮಾತ್ರ ಇದು ಸಾಧ್ಯ. ನಮ್ಮ ಯುವಕರಲ್ಲಿ ಇಂತಹ ದೇಶಭಕ್ತಿ ಬಿತ್ತುವುದರ ಜೊತೆಗೆ ಈಗ ದುಶ್ಚಟಗಳಿಂದ ದೂರ ಇಡುವ ಕಾರ್ಯ ನಡೆಯಬೇಕಾಗಿದೆ. ಎಲ್ಲ ಸಂದರ್ಭಗಳಲ್ಲಿಯೂ ಒಳ್ಳೆಯವರಾಗಿ ಬದುಕಲು ಬೇಕಾಗುವ ಇಚ್ಛಾಶಕ್ತಿಯನ್ನು ಬೆಳೆಸಬೇಕು. ಸ್ವಯಂ ಸಾಹಸಿಗನಾಗಿ ದೇಶಕ್ಕೆ ಸಮಾಜಕ್ಕೆ ಹಿತ ಮಾಡಲು ಯುವಕರನ್ನು ಸಿದ್ಧಗೊಳಿಸಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ, ಶಿಬಿರದ ಸಂಯೋಜಕ ಸಿದ್ದಲಿಂಗಪ್ಪ ಕಮಡೊಳ್ಳಿ, ಇದು ನಮ್ಮ ಸಂಸ್ಥೆಯಿಂದ ಎರಡನೆ ತರಬೇತಿಯಾಗಿದೆ. ಯುವಕರನ್ನು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಪೂರ್ಣ ಪ್ರಮಾಣದ ಉಚಿತ ತರಬೇತಿ ಶಿಬಿರ ಇದಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ತರಬೇತಿಗಾಗಿ ಯುವಕರು ಪಾಲ್ಗೊಂಡಿದ್ದಾರೆ. ಈ ಯುವಕರು ದೇಶಕ್ಕೆ ಸಮಾಜಕ್ಕೆ ಹಿತಕಾರಿಯಾಗಿ ಬಾಳಲಿ ಎಂಬುದಕ್ಕಾಗಿಯೇ ಈ ತರಬೇತಿ ನೀಡಲಾಗುತ್ತಿದೆ ಎಂದರು.ಸೈನ್ಯದ ನಿವೃತ್ತ ಸುಬೇದಾರರಾದ ಕೆ.ಬಿ. ಪಾಟೀಲ, ನಿವೃತ್ತ ಸೈನಿಕರಾದ ಜಗದೀಶ ಮೆಣಸಿನಕಾಯಿ, ಶಂಕರಗೌಡ ಪಾಟೀಲ, ಕುಮಾರ ಎಳವಟ್ಟಿ, ಅರುಣಕುಮಾರ ಮೆಳ್ಳಳ್ಳಿ, ಸಂತೋಷ ಆರೇರ, ಗಣ್ಯರಾದ ಪುಟ್ಟಯ್ಯ ಹಿರೇಮಠ, ಜಯಲಿಂಗಪ್ಪ ಹಳಕೊಪ್ಪ, ಶಾಂತವೀರೇಶ ನೆಲೋಗಲ್ಲ ಅತಿಥಿಗಳಾಗಿದ್ದರು.