ಸಾರಾಂಶ
ಹಾನಗಲ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಒಟ್ಟಾಗಿ ದುಡಿಯುವ, ದುಡಿದ ಹಣವನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಇದರೊಂದಿಗೆ ನಮ್ಮ ಮನೆಗಳನ್ನು ನಂದನವನಗಳಂತೆ ಸಂಸ್ಕಾರಯುತವಾಗಿ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜ್ವಾಲಾ ಹೇಳಿದರು. ತಾಲೂಕಿನ ಆಡೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ದಿವ್ಯ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಒಟ್ಟಾಗಿ ಬದುಕುವ, ಕಲಹಗಳಿಲ್ಲದೆ ಪ್ರೀತಿ ವಿಶ್ವಾಸದಿಂದ ಕಾಣುವ ಸಂಸ್ಕಾರ ನಮ್ಮದಾಗಬೇಕಾಗಿದೆ. ಹೀಗಾಗಿ ಇಡೀ ರಾಜ್ಯದ ಸಾವಿರ ಸಾವಿರ ಸಂಖ್ಯೆಯ ಸ್ವಸಹಾಯ ಸಂಘಗಳ ಮೂಲಕ ಉತ್ತಮ ಸಂಸ್ಕಾರ ನೀಡುವ ಕಾರ್ಯದಲ್ಲಿ ನಮ್ಮ ಸಂಸ್ಥೆ ಮುನ್ನಡೆದಿದೆ. ಇದು ಮಾರ್ಗದರ್ಶನ ಮಾತ್ರ ಅದನ್ನು ಪಾಲಿಸಬೇಕಾದವರು ಸದಸ್ಯರು ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ತಾಯಂದಿರು ನೀಡುವ ಸಂಸ್ಕಾರ ಬಲದಿಂದಲೇ ಮನೆ ಆನಂದಮಯವಾಗಲು ಸಾಧ್ಯ ಎಂಬ ಸತ್ಯ ಅರಿತು, ಆರೋಗ್ಯವಂತ ಕುಟುಂಬ ಜೀವನಕ್ಕೆ ಎಲ್ಲರೂ ಒಟ್ಟಾಗಿ ಯೋಜಿಸಿ ಯೋಚಿಸಿ ಮುನ್ನಡೆಯಬೇಕು. ಕುಟುಂಬಗಳಿಗೆ ಸಂಸ್ಕಾರ ಕುರಿತು ಮಾತನಾಡಿದ ಅವರು, ಮಾನವ ಬದುಕು ನಮಗೆ ಬಂದಿರುವುದೇ ಒಂದು ಭಾಗ್ಯ. ಇದರ ಸಾಕಾರಕ್ಕೆ ಉತ್ತಮ ಸಮಾಲೋಚನೆ, ಯೋಗ್ಯ ಸಂಸ್ಕಾರ ಅತ್ಯಂತ ಮುಖ್ಯ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅಲ್ಲದೆ ಕುಟುಂಬ ಜೀವಿ. ಆದರೆ ಹತ್ತು ಹಲವು ಅಡಚಣೆಗಳನ್ನು ಮುಂದಿಟ್ಟುಕೊಂಡು ಸ್ವಾಸ್ಥ್ಯದಿಂದ ದೂರವಾಗಿ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿರುವ ಮನುಷ್ಯನಿಗೆ ಉತ್ತಮ ಸಂಸ್ಕಾರ ಬೇಕಾಗಿದೆ. ಇದರಲ್ಲಿ ತಾಯಿಯ ಪಾತ್ರ ಬಹು ದೊಡ್ಡದು. ನಾಗರಿಕತೆಯ ಹೆಸರಿನಲ್ಲಿ ಅನಾಗರಿಕ ಯೋಚನೆಗಳನ್ನೇ ಅನುಸರಿಸಲು ಮುಂದಾಗಿ ಕುಟುಂಬಗಳು ದಿವಾಳಿಯಾಗುತ್ತಿವೆ. ನಮ್ಮ ಪೂರ್ವಜನರು ಋಷಿಮುನಿಗಳು ನೀಡಿದ ಸನ್ಮಾರ್ಗದ ಚಿಂತನೆಗಳು ಎಲ್ಲ ಮನೆಗಳನ್ನು ತಲುಪಿ ಅಂತಹ ಜೀವನ ವಿಧಾನದತ್ತ ನಡೆಯಬೇಕು. ಬದಲಾದ ಯಾಂತ್ರಿಕ ಕಾಲದಲ್ಲಿ ಬದಲಾಗೋಣ. ಅದರೆ ಅದು ಸಂಸ್ಕಾರದಿಂದ ಹೊರಗುಳಿಯುವುದು ಬೇಡ. ಗುರು ಕುಲ ಶಿಕ್ಷಣದಂತಹ ಶಿಕ್ಷಣ ಈಗ ಬೇಕಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮ ಸಂಸ್ಕಾರ ನೀಡುವ ಚಿಂತನೆಗೆ ತೊಡಗಿರುವುದು ಸ್ವಾಗತಾರ್ಹ ಎಂದರು.ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಕಮ್ಮಾರ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಶಶಿರೇಖಾ ಪಾಟೀಲ, ಸಂಘದ ತಾಲೂಕು ಲೆಕ್ಕ ಪರಿಶೋಧಕ ಗಣೇಶ ಈ ಸಂದರ್ಭದಲ್ಲಿದ್ದರು.