ರಾಮ ರಾಜ್ಯ ಬದಲು ಕಲ್ಯಾಣ ರಾಜ್ಯವಾಗಬೇಕು: ಸಾಣೆಹಳ್ಳಿಯ ಶ್ರೀ

| Published : Mar 30 2024, 12:54 AM IST

ಸಾರಾಂಶ

ರಾಮ ರಾಜ್ಯದ ಬದಲು ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ಹಿಂಸೆಯ ಬದಲು ಗಾಂಧಿಯ ಸತ್ಯ, ಅಹಿಂಸೆಗಳು ತತ್ವಗಳಾಗಬೇಕು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಹೊಸದುರ್ಗ: ರಾಮ ರಾಜ್ಯದ ಬದಲು ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ಹಿಂಸೆಯ ಬದಲು ಗಾಂಧಿಯ ಸತ್ಯ, ಅಹಿಂಸೆಗಳು ತತ್ವಗಳಾಗಬೇಕು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್ಎಸ್ ರಂಗಮಂದಿರದಲ್ಲಿ ಶಿವಕುಮಾರ ಕಲಾಸಂಘ ಹಾಗೂ ದೆಹಲಿಯ ಪ್ರಸಿದ್ಧ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಅವರ ಪರಿಕಲ್ಪನೆ, ನೃತ್ಯ ಸಂಯೋಜನೆ, ಕಲಾತ್ಮಕ ನಿರ್ದೇಶನದ ‘ಏಕಮ್ ಸತ್ ವಿಪ್ರಾ ಬಹುಧಾ ವದಂತಿ’ ಮತ್ತು ‘ಮಹಾತ್ಮರ ನಂತರ ಭಾರತ’ ಎಂಬ ಶಾಸ್ತ್ರೀಯ ನೃತ್ಯ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇತ್ತೀಚೆಗೆ ರಾಮನ ಹಿನ್ನೆಲೆಯಲ್ಲಿ ಎನೆಲ್ಲಾ ನಡೆಯುತ್ತಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ನೃತ್ಯದಲ್ಲಿ ಕಲಾವಿದರು ಸಾಕಷ್ಟು ಪರಿಣಿತರಿದ್ದು, ರಂಗವೇದಿಕೆಯನ್ನು ಬಳಸಿಕೊಂಡಿದ್ದು, ಅವರ ಆಂಗಿಕ ಚಲನವಲನಗಳು, ಅಭಿವ್ಯಕ್ತಿಗಳು ತುಂಬಾ ಮನೋಜ್ಞವಾಗಿ ಮೂಡಿಬಂದಿವೆ. ಭಾರತದ ತ್ರಿವರ್ಣ ಧ್ವಜದ ಸಂಕೇತವನ್ನು ಅಲ್ಲಲ್ಲಿ ಬಳಿಸಿದ್ದು ಎಲ್ಲಾ ಮತ-ಪಂಥದವರು ಸಂಘರ್ಷಗಳನ್ನು ಬಿಟ್ಟು ಒಟ್ಟಾಗಿ ನಡೆದರೆ ಭಾವೈಕ್ಯತೆಯಿಂದ ಬಾಳಲು ಸಾಧ್ಯ ಎಂಬುದನ್ನು ತೋರಿಸಲಾಗಿದೆ ಎಂದರು.

ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಗಾಂಧಿಯವರ ಸತ್ಯ ಮತು ಅಹಿಂಸೆಯ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಭಾ ಕಲಾವಿದರೊಂದಿಗೆ ತಾವು ಅಭಿನಯಿಸಿದ್ದು ಸಂತೋಷವನ್ನು ತಂದಿದೆ. ಸಾಣೇಹಳ್ಳಿಯಲ್ಲಿ ಇಂತಹ ಅನೇಕ ರಂಗ ಚಟುವಟಿಕೆಗಳು ಸದಾ ನಡೆಯುತ್ತಿದ್ದು ಅದರಿಂದ ಸಾರ್ವಜನಿಕರು ಜಾಗೃತರಾಗಬೇಕಿದೆ. ಈ ನೃತ್ಯ ಪ್ರದರ್ಶನ ಆಯೋಜನೆ ಮಾಡಿದ ಕಪ್ಪಣ್ಣನವರಿಗೆ, ಪ್ರದರ್ಶನಕ್ಕೆ ತಮ್ಮ ತಂಡವನ್ನು ಕರೆತಂದ ಪ್ರತಿಭಾ ಪ್ರಹ್ಲಾದ್ ಅವರಿಗೆ, ನೃತ್ಯ ಪ್ರದರ್ಶಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು ಎಂದರು.

ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಮಾತನಾಡಿ, ಕಳೆದ 75 ವರ್ಷಗಳಲ್ಲಿ, ಭಾರತದ ಹೋರಾಟ ದಬ್ಬಾಳಿಕೆ ಮತ್ತು ಬ್ರಿಟಿಷರ ಆಡಳಿತಗಳನ್ನು ಮೀರಿ ಸಮಾಜದಲ್ಲಿನ ಅಸ್ಪೃಶ್ಯತೆ, ಅನಕ್ಷರತೆ, ಸ್ವಚ್ಛತೆ ಮತ್ತು ಸ್ತ್ರೀ-ಪುರುಷರ ಅಸಮಾನತೆ, ಅನ್ಯಾಯಗಳ ಮೇಲೆ ಗಮನಹರಿಸಿದೆ. ಇಂದಿನ ನಮ್ಮ ಹೋರಾಟ ಭಾರತದ ವಿಚಾರ ಧಾರೆ ಮತ್ತು ಅದರ ಆತ್ಮವನ್ನೇ ಶುದ್ಧಗೊಳಿಸುವುದಾಗಿದೆ. ಭಾರತೀಯರ ಮನವನ್ನು ಬ್ರಿಟಿಷ್ ಸಾಮ್ರಾಜ್ಯದ ಪ್ರಭಾವದಿಂದ ಮುಕ್ತರನ್ನಾಗಿಸಿ, ಅವರಿಗೆ ದೇಶದ ನಿಜವಾದ ಭವ್ಯ ಪರಂಪರೆಯನ್ನು ಪರಿಚಯಿಸಿ, ಅವರಲ್ಲಿ ಸಾಮರ್ಥ್ಯ ಮತ್ತು ಸಂಸ್ಕೃತಿ ಬಗ್ಗೆ ಹೆಮ್ಮೆ ಮತ್ತು ಆತ್ಮವಿಶ್ವಾಸ ತುಂಬುವುದು ಇಂದಿನ ಅಗತ್ಯವಾಗಿದೆ ಎಂದರು.

ರಂಗ ಸಂಘಟಕ ಶ್ರೀನಿವಾಸ ಕಪ್ಪಣ ಮಾತನಾಡಿ, ಈ ಹಿಂದೆ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದಿಂದ ಆಯೋಜಿಸಿದ ನೀನಲ್ಲದೇ ಮತ್ತಾರೂ ಇಲ್ಲವಯ್ಯ ವಚನ ನೃತ್ಯ ಕಾರ್ಯಕ್ರಮವನ್ನು ದೇಶದ 16 ರಾಜ್ಯಗಳಲ್ಲಿ 25 ಜನ ಕಲಾವಿದೆಯರು ಬಸ್‌ನಲ್ಲಿ ಪ್ರಯಾಣಿಸಿ 55 ಪ್ರದರ್ಶನಗಳನ್ನು ನೀಡಿದ ದಾಖಲೆ ಅತ್ಯಂತ ಶ್ಲಾಘನೀಯವಾದುದು.

ಅದರಂತೆ ಇಡೀ ದೇಶದಲ್ಲಿ ಯಾವುದಾದರೂ ಅತ್ಯಂತ ಪ್ರಸಿದ್ಧವಾದ ಸಾಂಸ್ಕೃತಿಕ ಉತ್ಸವ ಪ್ರತಿಭಾ ಪ್ರಹ್ಲಾದ ಅವರು ದೆಹಲಿಯಲ್ಲಿ ನಡೆಸಿದ ಅಂತರಾಷ್ಟಿಯ ಕಲಾ ಸಾಂಸ್ಕೃತಿಕ ಉತ್ಸವ. ಈ ಉತ್ಸವದಲ್ಲಿ ಭಾರತದ ಶ್ರೇಷ್ಠ ಕಲಾವಿದರು ಮಾತ್ರವಲ್ಲದೇ ವಿದೇಶದ ಪ್ರಖ್ಯಾತ ತಂಡಗಳು, ಕಲಾವಿದರು, ರಾಯಭಾರಿಗಳು ಭಾಗಿಯಾಗಿದ್ದರು. ಇವರು ಇದುವರೆಗೂ 80 ದೇಶದಲ್ಲಿ ಸುಮಾರು 5000 ಪ್ರದರ್ಶನಗಳನ್ನು ಕೊಟ್ಟಿದ್ದಾರೆ ಎಂದರು.

ದೆಹಲಿಯ ಪ್ರಸಿದ್ಧ ಫೌಂಡೇಶನ್ ಅವರ ಪ್ರತಿಭಾ ಪ್ರಹ್ಲಾದ್ ಪರಿಕಲ್ಪನೆ, ನೃತ್ಯ ಸಂಯೋಜನೆ, ಕಲಾತ್ಮಕ ನಿರ್ದೇಶನದ ‘ಏಕಮ್ ಸತ್ ವಿಪ್ರಾ ಬಹುದಾ ವದಂತಿ’ ಮತ್ತು ‘ಮಹಾತ್ಮರ ನಂತರ ಭಾರತ’ ಎಂಬ ಶಾಸ್ತಿಯ ನೃತ್ಯಪ್ರದರ್ಶನ ಯಶಸ್ವಿಯಾಗಿ ಪ್ರದರ್ಶನಗೊಂಡು ನೆರೆದಿದ್ದ ಕಲಾಸಕ್ತರ ಮೆಚ್ಚುಗೆ ಪಡೆದು ರಂಗ ರಸದೌತಣವನ್ನು ನೀಡಿತು.