ಚೆಕ್‌ಪೋಸ್ಟ್‌ಗೆ ಹೋಂ ಗಾರ್ಡ್‌ ಹಾಕಲು ೩ ದಿನ ಬೇಕಾ?

| Published : Dec 06 2024, 08:59 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಮರಳಿ ಹಳ್ಳದ ಬಳಿ ಓವರ್‌ ಲೊಡ್‌ ಟಿಪ್ಪರ್‌ ತೆರಳುತ್ತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹೋಂ ಗಾರ್ಡ್‌ ಬದಲಾವಣೆ ನೆಪದಲ್ಲಿ ತಿಂಗಳ ಮೊದಲ ದಿನ ಚೆಕ್‌ ಪೋಸ್ಟ್‌ ಬಾಗಿಲು ಮುಚ್ಚಿತ್ತು. ಇದೀಗ ಕಳೆದ ಎರಡು ದಿನಗಳಿಂದ ಹಿರೀಕಾಟಿ ಖನಿಜ ತನಿಖಾ ಠಾಣೆ (ಚೆಕ್‌ ಪೋಸ್ಟ್‌) ಬಾಗಿಲು ಬಂದಾಗಿದೆ. ಹೋಂ ಗಾರ್ಡ್‌ ಬದಲಿಸಲು ಎರಡು/ಮೂರು ದಿನಾ ಬೇಕಾ? ಎಂಬ ಪ್ರಶ್ನೆ ಎದ್ದಿದೆ.

ರಾಜಧನ ವಂಚನೆ ಪ್ರತಿನಿತ್ಯ ಲಕ್ಷಾಂತರ ರುಪಾಯಿ ಆಗುತ್ತಿದೆ. ಕ್ವಾರಿಯಲ್ಲಿ ಕಲ್ಲು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಕಲ್ಲು ಸಾಗಾಣಿಕೆ ಮಾಡಿ ರಾಜಧನ ವಂಚನೆಯಾಗುತ್ತಿದೆ. ಆದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಕ್ವಾರಿ, ಕ್ರಷರ್‌ ಮಾಲೀಕರ ಬೆಂಬಲಕ್ಕೆ ಜಿಲ್ಲಾಡಳಿತ ಬೆಂಬಲ ನೀಡಿದೆಯಾ ಎಂಬ ಅನುಮಾನ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಹಿರೀಕಾಟಿ ಬಳಿಯ ಖನಿಜಾ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಇರುವಾಗಲೇ ಬಹುತೇಕ ಕ್ವಾರಿ, ಕ್ರಷರ್‌ ಮಾಲೀಕರು ಟಿಪ್ಪರ್‌ಗಳಿಗೆ ರಾಯಲ್ಟಿ/ಎಂಡಿಪಿ ಹಾಕದೆ ಟಿಪ್ಪರ್‌ಗಳು ಸಂಚರಿಸುತ್ತಿವೆ.

ಹೋಂ ಗಾರ್ಡ್‌ ಬದಲಾವಣೆ ನೆಪದಲ್ಲಿ ಎರಡರಿಂದ ಮೂರು ದಿನ ಚೆಕ್‌ ಪೋಸ್ಟ್‌ ಬಂದಾಗುತ್ತದೆ. ಅಲ್ಲದೆ ಚೆಕ್‌ ಪೋಸ್ಟ್‌ ಇರುವಾಗಲೂ ಕಾಟಾಚಾರದ ತಪಾಸಣೆ ನಡೆಯುತ್ತಿದೆ. ಇದನ್ನು ಕೇಳಬೇಕಾದ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪವಿದೆ. ಚೆಕ್‌ಪೋಸ್ಟ್‌ಗೆ ಹೋಂ ಗಾರ್ಡ್‌ ಬರಲಿಲ್ಲವೋ ಅಥವಾ ಬದಲಾವಣೆ ಮಾಡುವ ತನಕ ಗಣಿ ಮತ್ತು ಭೂ ವಿಜ್ಞಾನಿಯನ್ನಾದರೂ ನೇಮಿಸಿ ತಪಾಸಣೆ ಮಾಡುವ ಅಧಿಕಾರ ಜಿಲ್ಲಾಡಳಿತಕ್ಕೆ ಇಲ್ಲವೇ ಎಂಬ ಪ್ರಶ್ನೆಯನ್ನು ಜಿಲ್ಲಾ ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಕಂದೇಗಾಲ ಶಿವಣ್ಣ ಎತ್ತಿದ್ದಾರೆ.

ಚೆಕ್‌ ಪೋಸ್ಟ್‌ ಬಾಗಿಲು ಬಂದಾದ ಬಳಿಕ ಹಗಲು ರಾತ್ರಿ ಎನ್ನದೆ ಕ್ರಷರ್‌ಗಳಿಂದ ಟಿಪ್ಪರ್‌ಗಳು ಓವರ್‌ ಲೋಡ್‌ ತುಂಬಿಕೊಂಡು ಎಂಡಿಪಿ ಇಲ್ಲದೆ ಮೈಸೂರಿನತ್ತ ಸಂಚರಿಸಿದರೆ, ಕ್ವಾರಿಯಿಂದಲೂ ರಾ ಮೆಟಿರಿಯಲ್‌ ಕೂಡ ಕ್ರಷರ್‌ ಬಾಯಿಗೆ ರಾಜಧನ ವಂಚಿಸಿ ಕಲ್ಲು ಹೋಗುತ್ತಿದೆ. ಪ್ರತಿ ನಿತ್ಯ ಲಕ್ಷಾಂತರ ರಾಜಧನ ಸೋರಿಕೆ ರಾಜಾರೋಷವಾಗಿ ಆಗುತ್ತಿದ್ದರೂ ಜಿಲ್ಲಾಡಳಿತ ರಾಜಧನ ಸೋರಿಕೆ ತಡೆಯಲು ಹಿಂದೇಟು ಹಾಕುತ್ತಿದೆ.

ತುಟಿ ಬಿಚ್ಚುತ್ತಿಲ್ಲ: ಮೊದಲೇ ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಅನುದಾನ ಹೊಂದಿಸಲು ಪರದಾಡುತ್ತಿದೆ. ಇಂಥ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಜಧನ ಪ್ರತಿ ದಿನ ಸೋರಿಕೆಯಾಗುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲವೇಕೆ ಎಂದು ಹಿರೀಕಾಟಿ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಹಿರೀಕಾಟಿ ಖನಿಜ ತನಿಖಾ ಠಾಣೆಯ ಹೋಂ ಗಾರ್ಡ್‌ ಬದಲಿಸುವ ನೆಪದಲ್ಲಿ ರಾಯಲ್ಟಿ/ಎಂಡಿಪಿ ವಂಚಿಸಿ ಹಗಲು ರಾತ್ರಿ ಎನ್ನದೆ ಕ್ವಾರಿ ಹಾಗೂ ಕ್ರಷರ್‌ ಉತ್ಪನ್ನಗಳು ತಾಲೂಕಿನಿಂದ ಇತರೆ ಜಿಲ್ಲೆಗೆ ತೆರಳುತ್ತಿವೆ. ರಾಜಧನ ಸೋರಿಕೆಗೆ ಜಿಲ್ಲಾಡಳಿತವೇ ಕಾರಣ. ಜಿಲ್ಲಾಧಿಕಾರಿ ಮೌನ ಮುರಿದು ಆದಾಯ ಸೋರಿಕೆಗೆ ತಡೆ ಹಾಕಬೇಕು.

-ಕಂದೇಗಾಲ ಶಿವಣ್ಣ, ಹೋರಾಟಗಾರಅಧಿಕಾರಿಗಳ ಸಿದ್ಧ ಉತ್ತರ!ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಹಿರೀಕಾಟಿ ಗೇಟ್‌ ಬಳಿ ಖನಿಜ ತನಿಖಾ ಠಾಣೆ ಮುಚ್ಚಿರುವ ಬಗ್ಗೆ ಕನ್ನಡಪ್ರಭ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ್‌ ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ಪತ್ರ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ ತಕ್ಷಣ ಹೋಂ ಗಾರ್ಡ್‌ ಬರುತ್ತಾರೆ ಎಂಬ ಸಿದ್ಧ ಉತ್ತರ ನೀಡಿದ್ದಾರೆ.