ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ನಿರ್ಮಾಣಗೊಂಡ 48 ವರ್ಷಗಳ ನಂತರ ರಾವುತನಹಳ್ಳಿ ಏತ ನೀರಾವರಿ ಯೋಜನೆ ಶುಕ್ರವಾರ ಉದ್ಘಾಟನೆಗೊಂಡಿದೆ. ಆಶ್ಚರ್ಯವಾದರೂ ಸತ್ಯ. ಆಳುವವರು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣದಿಂದ ಯೋಜನೆಯೊಂದು ಹೇಗೆಲ್ಲಾ ನೆನಗುದಿಗೆ ಬೀಳಲಿದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.ಕಟ್ಟಾಯ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ರಾವುತನಹಳ್ಳಿ, ಮುಟ್ಟನಹಳ್ಳಿ, ತಮ್ಮಗಾನಹಳ್ಳಿ, ಕಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಐನೂರು ಎಕೆರೆ ಪ್ರದೇಶಕ್ಕೆ ಯಗಚಿ ಹಿನ್ನೀರಿನಿಂದ ನೀರು ಪೊರೈಸುವ ಏತ ನೀರಾವರಿ ಯೋಜನೆಗೆ ೧೯೭೧ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ೧೯೭೬ರಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ, ಯೋಜನೆಗೆ ವಿದ್ಯುತ್ ಪೂರೈಕೆಯಾಗದ ಕಾರಣ ಕಾಮಗಾರಿ ಉದ್ಘಾಟನೆ ಸಾಧ್ಯವಾಗಿರಲಿಲ್ಲ.
ಶಾಸಕ ಮಂಜು ಕಳಕಳಿ:ಕನಿಷ್ಠ ಮಳೆ ಬೀಳುವ ಕಟ್ಟಾಯ ಹೋಬಳಿಯಲ್ಲಿ ಮಳೆಯಾಶ್ರಿತ ಬೆಳೆ ಮಾಡುವುದಕ್ಕೆ ಮಾತ್ರ ಇಲ್ಲಿನ ಜನರು ಸೀಮಿತಗೊಂಡಿದ್ದರು. ರಾವುತಹಳ್ಳಿ ಏತ ನೀರಾವರಿ ಯೋಜನೆ ಜಾರಿಗೊಳಿಸಿ ಎಂಬ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಯಾವುದೇ ಆಡಳಿತಗಾರರು ಇತ್ತ ಗಮನಹರಿಸಿರಲಿಲ್ಲ. ಆದರೆ, ಯೋಜನೆ ನೆನಗುದಿಗೆ ಬಿದ್ದಿರುವುದನ್ನು ಗಮನಿಸಿದ್ದ ಆಲೂರು-ಸಕಲೇಶಪುರ-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಕೇವಲ ೭ ಲಕ್ಷ ರು. ವೆಚ್ಚದಲ್ಲಿ ಯೋಜನೆಗೆ ನಿರಂತರ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡುವ ಮೂಲಕ ಯೋಜನೆ ಉದ್ಘಾಟನೆಗೊಳಿಸಿದ್ದಾರೆ.
ಸಂತಸ ಪಡುವಂತಿಲ್ಲ:ಯೋಜನೆ ಜಾರಿಗೊಂಡು ಅರ್ಧ ಶತಮಾನ ಕಳೆದಿರುವ ಪರಿಣಾಮ ನೀರಾವರಿ ಕಲ್ಪಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಕಾಲುವೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಂಡಿದ್ದು ಅಂದುಕೊಂಡಂತೆ ನೀರು ಹರಿಯುವುದು ಸಾಧ್ಯವಾಗಿಲ್ಲ. ಪರಿಣಾಮ ಯೋಜನೆ ಉದ್ಘಾಟನೆಗೊಂಡರು ಯೋಜನಾ ವ್ಯಾಪ್ತಿಯ ಎಲ್ಲ ರೈತರ ಭೂಮಿಗೂ ನೀರು ದೊರೆಯುವುದು ದುಸ್ಥರವಾಗಿದ್ದು ಕಾಲುವೆಗಳ ದುರಸ್ಥಿಗೆ ಅನುದಾನ ಬೇಕಿದೆ. ದೀಪದ ಕೆಳಗೆ ಕತ್ತಲು:
ಕಟ್ಟಾಯ ಹೋಬಳಿ ವ್ಯಾಪ್ತಿಯಲ್ಲಿ ಹೇಮಾವತಿ ನದಿಗೆ ನಿರ್ಮಾಣಮಾಡಿರುವ ಗೊರೊರು ಜಲಾಶಯವಿದ್ದರೂ ಕಟ್ಟಾಯ ಹೋಬಳಿ ಬರಪೀಡಿತವಾಗಿದೆ. ಇಲ್ಲಿನ ರೈತರಿಗೆ ಡ್ಯಾಮ್ ಇದ್ದರೂ ಕುಡಿಯಲು ಈ ಡ್ಯಾಮ್‌ನಿಂದ ನೀರು ದೊರೆಯದಾಗಿದ್ದು ಯಗಚಿ ಹೊಳೆ ಇಲ್ಲಿನ ಜನರ ನೀರಿನ ಬವಣೆ ನೀಗಿಸುತ್ತಿದೆ. ಯಗಚಿ ಹೊಳೆಯಲ್ಲಿ ನೀರು ಕಡಿಮೆಯಾದರೆ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸಬೇಕಿದೆ. ೩೦ ಕೋಟಿ ೩೦ ವರ್ಷ:ಹಾಸನ ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗೂರೂರು ಗ್ರಾಮ ಸಮೀಪ ಅಮೃತ್ ಯೋಜನೆಯಡಿ ಹೊಸದಾಗಿ ನಿರ್ಮಾಣಗೊಂಡಿರುವ ಕುಡಿಯುವ ನೀರು ಪೊರೈಕೆ ಘಟಕದಿಂದಾಗಿ ೧೯೯೫ ರಲ್ಲಿ ಗೊರೂರು ಡ್ಯಾಮ್‌ನಿಂದ ಹಾಸನ ನಗರಕ್ಕೆ ನೀರು ಪೂರೈಸುವ ಉದ್ದೇಶದಿಂದ ೩೦ ಕೋಟಿ ರು. ವೆಚ್ಚದಲ್ಲಿ ಗೊರೂರು ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಹಳೇ ನೀರು ಪೊರೈಕೆ ಘಟಕ ಈಗ ಯಾರಿಗೂ ಬೇಡದ ಕೂಸಾಗಿ ಪಾಳು ಬಿದ್ದಿದೆ. ಕೇವಲ ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ನೀರು ಪೂರೈಕೆ ಘಟಕ ಸುಸ್ಥಿತಿಯಲ್ಲಿದ್ದರೂ ಇದನ್ನು ಬಳಸಲಾಗುತ್ತಿಲ್ಲ. ಪರಿಣಾಮ ಕೊಟ್ಯಂತರ ರು. ಬೆಲೆಬಾಳುವ ಕಬ್ಬಿಣ ಕಳ್ಳರ ಪಾಲಾಗುತ್ತಿದೆ. ಈ ಘಟಕವನ್ನು ಬೇರೆ ನೀರಾವರಿ ಯೋಜನೆಗೆ ಬಳಸಿಕೊಳ್ಳಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.
==========* ಹೇಳಿಕೆಐವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಏತನೀರಾವರಿ ಯೋಜನೆಯನ್ನು ಈಗ ಉದ್ಘಾಟಿಸುವ ಮೂಲಕ ಈ ಭಾಗದ ಬಹುವರ್ಷದ ನೀರಿನ ಸಮಸ್ಯೆಯನ್ನು ನೀಗಿಸಲಾಗಿದೆ.
- ಸಿಮೆಂಟ್ ಮಂಜು, ಶಾಸಕ