ವಕ್ಫ್‌ ಆಸ್ತಿ ವಿರುದ್ಧ ನಡೆದದ್ದು ರಾಜಕೀಯ ಹೋರಾಟ

| Published : Oct 17 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್ ಆಸ್ತಿ ವಿರುದ್ಧ ವಿಜಯಪುರದಲ್ಲಿ ನಡೆದ ಹೋರಾಟ ರಾಜಕೀಯವಾಗಿ ಮಾಡಲಾಗಿದೆ. ಜಿಲ್ಲಾದ್ಯಂತ ಸುಮಾರು 10 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಸರ್ವೇ ಮಾಡಿ ಫ್ಲ್ಯಾಗಿಂಗ್ ಮಾಡಲು ಸಚಿವ ಜಮೀರ್ ಅಹಮ್ಮದ್‌ ಹೇಳಿದ್ದಾರೆ. ಆದರೆ, ವಕ್ಫ್‌ನಿಂದ ರೈತರ ಆಸ್ತಿ ಕಬಳಿಸಲಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್ ಆಸ್ತಿ ವಿರುದ್ಧ ವಿಜಯಪುರದಲ್ಲಿ ನಡೆದ ಹೋರಾಟ ರಾಜಕೀಯವಾಗಿ ಮಾಡಲಾಗಿದೆ. ಜಿಲ್ಲಾದ್ಯಂತ ಸುಮಾರು 10 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಸರ್ವೇ ಮಾಡಿ ಫ್ಲ್ಯಾಗಿಂಗ್ ಮಾಡಲು ಸಚಿವ ಜಮೀರ್ ಅಹಮ್ಮದ್‌ ಹೇಳಿದ್ದಾರೆ. ಆದರೆ, ವಕ್ಫ್‌ನಿಂದ ರೈತರ ಆಸ್ತಿ ಕಬಳಿಸಲಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.98ರಷ್ಟು ಮುಸ್ಲಿಂ ಮುತುವಲ್ಲಿಗಳ ಮಧ್ಯೆ ಈ ವ್ಯಾಜ್ಯ ಇದೆ. ಇದಕ್ಕೂ ಹಿಂದೂಗಳಿಗೂ ಯಾವುದೇ ಸಂಬಂಧವಿಲ್ಲ. ವಿಜಯಪುರಕ್ಕೆ ಮುಸ್ಲಿಂ ಮಂತ್ರಿ ಬಂದಿದ್ದಾರೆ ಎಂದು ಯತ್ನಾಳ ಅವರಿಗೆ ಹೊಟ್ಟೆ ಉರಿಯುತ್ತಿದೆ. ಹೀಗಾಗಿ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಮನಸಿಗೆ ಬಂದಂತೆ ರೈತರ ಭೂಮಿಯನ್ನು ವಕ್ಫ್‌ಗೆ ತೆಗೆದುಕೊಳ್ಳಲು ಬರುವುದಿಲ್ಲ, ಆ ಹಕ್ಕು ಯಾರಿಗೂ ಇಲ್ಲ. ಹಾಗೇನಾದರೂ ತೆಗೆದುಕೊಂಡರೆ ನಾವೇ ರೈತರ ಜೊತೆ ಹೋಗಿ ನಿಲ್ಲುತ್ತೇವೆ. ಯತ್ನಾಳ ಅವರು ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ ಎಂದು ಜನರನ್ನು ಒಕ್ಕಲೆಬ್ಬಿಸಿ ಒಣ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಇನ್ನೂ ಎರಡೂವರೇ ವರ್ಷ ಇರುವಾಗಲೇ ಇವರು ಓಟಿಂಗ್ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅಪ್ಪಟ ಹಿಂದೂವಾದಿಯಂತೆ ಮಾತನಾಡುವ ಶಾಸಕ ಯತ್ನಾಳ ಈ ಹಿಂದೆ ಈದ್ ಮಿಲಾದ್ ಕಾರ್ಯಕ್ರಮದಲ್ಲಿ, ಟಿಪ್ಪುಸುಲ್ತಾನ್ ಜಯಂತಿಯಲ್ಲಿ, ಬಕ್ರೀದ್ ಹಾಗೂ ರಂಜಾನ್‌ ಹಬ್ಬಗಳಲ್ಲಿ ಮುಸ್ಲಿಂ ಟೋಪಿ ಹಾಕಿಕೊಂಡು ಪಾಲ್ಗೊಂಡಿರುವ ಪೋಟೊಗಳನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಅವರಿಗೆ ಅವಹೇಳನಕಾರಿಯಾಗಿ ಮಾತನಾಡುತ್ತಾನೆ. ಅವರ ಬಗ್ಗೆ ಮಾತನಾಡಲು ಇವ ಯಾರು ಎಂದು ಯತ್ನಾಳ ಮೇಲೆ ಹರಿಹಾಯ್ದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಯತ್ನಾಳ ಅವರು ಎಷ್ಟೆಲ್ಲ ಮಾತನಾಡಿದರೂ ನಾವು ಶಾಂತಿ ಕದಡಬಾರದು ಎಂದು ಸುಮ್ಮನಿದ್ದೇವೆ. ನಗರದಲ್ಲಿ ಶಾಂತಿ ಕೆಡಿಸಲು ಅವರು ಎಷ್ಟೇ ಪ್ರಯತ್ನಿಸಿದರೂ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ. ನಾವು ಕಾನೂನು ವ್ಯಾಪ್ತಿಯಲ್ಲಿ ಮಾತ್ರ ಹೋರಾಟ ಮಾಡುತ್ತೇವೆ. ಆದರೆ, ಯತ್ನಾಳ ಅವರದ್ದು ಅತಿಯಾಗಿದ್ದರಿಂದ ನಾವು ರಸ್ತೆಗಿಳಿದು ಪ್ರತಿಭಟಿಸಬೇಕಾಗಿದೆ. ವಕ್ಫ್ ಆಸ್ತಿಯು ಅಲ್ಲಾನ ಹೆಸರಿನಲ್ಲಿ ದಾನಿಗಳು ಬಿಟ್ಟಿರುವ ಆಸ್ತಿ ಇದೆ. ಇದರಲ್ಲಿ ಸರ್ಕಾರಿ, ರೈತರ ಜಾಗ ತೆಗೆದುಕೊಂಡಿರುವುದು ಇಲ್ಲ ಎಂದು ಸ್ಪಷ್ಟಪಡಿಸಿದರು.

ಯತ್ನಾಳ ಅವರು ಬ್ರಿಟಿಷರಂತೆ ಹಿಂದೂ ಮುಸ್ಲಿಮರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಹಿಂದೂಗಳು ಕಿವಿಗೊಡಬಾರದು. ಎಲ್ಲರೂ ಒಗ್ಗಟ್ಟಾಗಿ ಅವರ ಕುತಂತ್ರ ಅರಿಯಬೇಕು. ಹಿಂದುತ್ವ ಹಿಂದುತ್ವ ಎನ್ನುವ ನೀವು ನಿಮ್ಮ ಮನೆಗೆ ದಲಿತರ ಸಂಬಂಧ ಬೆಳೆಸಿ ನೊಡೋಣ ಎಂದು ಸವಾಲು ಹಾಕಿದರು. ಜಗತ್ತು ಹುಟ್ಟಿದಾಗಿನಿಂದಲೇ ಇಸ್ಲಾಂ ಧರ್ಮವಿದೆ. ಮೊದಲು ಸರಿಯಾಗಿ ಓದು ಎಂದು ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾದೇವ ರವಜಿ, ಫಯಾಜ್ ಕಲಾದಗಿ, ಆನಂದ ಜಾಧವ್, ಮಹಾದೇವಿ ಗೋಕಾಕ, ಸಂತೋಷ ಪವಾರ, ಭಾರತಿ ಹೊಸಮನಿ, ಕಾಶೀಬಾಯಿ ಹಡಪದ, ಪರಶುರಾಮ ಹೊಸಮನಿ, ಮಂಜುನಾಥ ನಿಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.----------