ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕರು ಹಾಗೂ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಸಹ ಒಬ್ಬರಾಗಿದ್ದಾರೆ. ತಮ್ಮದೆಯಾದ ವಿಶಿಷ್ಟ ವಚನಗಳ ಮೂಲಕ ಅಂಬಿಗರ ಚೌಡಯ್ಯ ಗಮನಸೆಳೆದಿದ್ದಾರೆ. ಅಂದಿನ ಕಾಲದ ಶೋಷಣೆ ವಿರುದ್ದ ತಮ್ಮದೇ ಆದ ವಚನಗಳಿಂದ ಶೋಷಿತರನ್ನು ಎಚ್ಚರಿಸಿದರು ಎಂದರು.ಸಮಾಜದ ಜನತೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಶ್ರಮ ಜೀವಿಗಳಾಗಿರುವ ಸಮುದಾಯ ಮಕ್ಕಳ ಮುಂದಿನ ಭವಿಷ್ಯದ ದೃಷ್ಠಿಯಿಂದ ಶಿಕ್ಷಣಕ್ಕೆ ವಿಶೇಷ ಗಮನಹರಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಅಂಬಿಗರ ಚೌಡಯ್ಯನವರು ಬಸವಣ್ಣನವರ ಕಾಯಕ ತತ್ವದಲ್ಲಿ ಅಪಾರವಾದ ನಂಬಿಕೆ ಉಳ್ಳವರಾಗಿದ್ದರು. ಅಂಬಿಗರ ಚೌಡಯ್ಯನವರು ತಮ್ಮ ಹೆಸರಿನಲ್ಲೇ ವಚನಾಂಕಿತವನ್ನು ಬಳಸಿ ರಚಿಸಿರುವ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಕಾಣಬಹುದಾಗಿದೆ ಎಂದರು.ಮುಖಂಡ ಪುರುಷೋತ್ತಮ್ ಮಾತನಾಡಿ ಅಂಬಿಗರ ಚೌಡಯ್ಯನವರು ಸಮಾಜದ ಡಂಬಾಚಾರಗಳನ್ನು ನಿರ್ಬೀತಿಯಿಂದ ಕಟುವಾಗಿ ಟೀಕಿಸಿದರು. ಅವರ ವಚನಗಳಲ್ಲಿ ವೈಚಾರಿಕತೆಯನ್ನ ನಿರೂಪಿಸಿದ್ದಾರೆ. ತಾರತಮ್ಯ ನೀತಿಯನ್ನು ವಿರೋಧಿಸಿದ್ದಾರೆ. ಇತರೆ ವಚನಕಾರರಿಗಿಂತ ಭಿನ್ನರಾಗಿದ್ದ ಅಂಬಿಗರ ಚೌಡಯ್ಯ ನುಡಿದಂತೆ ನಡೆದವರು ಎಂದರು.ಸಂಘಟನೆ ಮುಖಂಡರಾದ ಪ್ರಕಾಶ್, ಇನ್ನಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.